ಹಾಸ್ಟೆಲ್ ಖಾಯಂ ನೌಕರರ ತಾತ್ಕಾಲಿಕ ನಿಯೋಜನೆ ವಿರೋಧಿಸಿ ಧರಣಿ
ಕಲಬುರಗಿ:ಮಾ.27:ಹಾಸ್ಟೆಲ್ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸ್ಥಳದಲ್ಲಿ ಖಾಯಂ ನೌಕರರಿಗೆ ತಾತ್ಕಾಲಿಕ ನಿಯೋಜನೆ (ಡೆಪ್ಯೂಟೇಷನ್) ಮಾಡಿರುವುದನ್ನು ರದ್ದುಪಡಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇರುವ ಹೆಚ್ಚುವರಿ ಹೊರಗುತ್ತಿಗೆ ನೌಕರರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ಸಂಘ ಜಿಲ್ಲಾ ಸಮಿತಿ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನೇರ ನೇಮಕಾತಿಯಿಂದ 150 ಜನ ಹೊರಗುತ್ತಿಗೆ ನೌಕರರು ಕಳೆದ ಒಂದು ವರ್ಷದಿಂದ ಕೆಲಸ ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಕೆಲವು ಜನ ನಿವೃತ್ತಿ ಹೊಂದಿದ ಸ್ಥಳದಲ್ಲಿ ನಿಯೋಜಿಸಿರುವುದರಿಂದ ಈಗ 60 ಜನ ಹೊರಗುತ್ತಿಗೆ ವಿಧವೆ, ಕಡು ಬಡವರು ದುಡಿಯಲು ಕೆಲಸವಿಲ್ಲದೇ ಉಪವಾಸ, ವನವಾಸ ಕಾಲ ಕಳೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅಫಜಲಪುರ, ಆಳಂದ್, ಜೇವರ್ಗಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೂ ಖಾಲಿ ಸ್ಥಳದಲ್ಲಿ ನೇಮಕಾತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಯಂ ನೌಕರರು ತಾತ್ಕಾಲಿಕ ವರ್ಗಾವಣೆ ಮಾಡುತ್ತಿರುವುದರಿಂದ ಆ ಸ್ಥಳದಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಂಡು ಅಲೆದಾಡುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೂಡಲೇ ನಿಯೋಜನೆ ಮಾಡಿರುವ ಎಲ್ಲ ಖಾಯಂ ನೌಕರರಿಗೆ ಅವರವರ ಸ್ಥಳಗಳಿಗೆ ಮರಳಿ ಕಳಿಸುವಂತೆ, ಮೂರು ಇಲಾಖೆಗಳಲ್ಲಿ ಖಾಲಿ ಇರುವ ಖಾಯಂ ಹುದ್ದೆಗಳಿಗೆ ನೌಕರರನ್ನು ವರ್ಗಾವಣೆ ಮಾಡದಿರುವಂತೆ ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಫಜಲಪುರ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ದೊಡ್ಡಮನಿ, ಕಲಬುರ್ಗಿ ತಾಲ್ಲೂಕು ಅಧ್ಯಕ್ಷೆ ಫಾತಿಮಾಬೇಗಂ ಫತ್ತೆಪಹಾಡ್, ಪರಶುರಾಮ್ ಹಡಲಗಿ, ಸರೋಜಾ ನಿಡಗುಂದಾ, ರಾಮಚಂದ್ರ ಪವಾರ್ ಮುಂತಾದವರು ಪಾಲ್ಗೊಂಡಿದ್ದರು.