ಕಲಬುರಗಿ : ಹೋಳಿ ಹಬ್ಬ: ಬಣ್ಣದಾಟದಲ್ಲಿ ಮಿಂದೆದ್ದ ಮಕ್ಕಳ ಸಂಭ್ರಮ

ಕಲಬುರಗಿ : ಎರಡು ದಿನಗಳ ಹೋಳಿ ಹಬ್ಬದ ನಿಮಿತ್ಯ ಭಾನುವಾರವೇ ನಗರದ ಕೆಲವು ಬಡಾವಣೆಗಳಲ್ಲಿ ಹೋಳಿ ಬಣ್ಣದಾಟದಲ್ಲಿ ತೊಡಗಿದ ದೃಶ್ಯಗಳು ಕಂಡುಬಂದವು. ಹೆಚ್ಚಾಗಿ ಮಕ್ಕಳೇ ಬಣ್ಣದಾಟದಲ್ಲಿ ತೊಡಗಿ ಬಣ್ಣದಲ್ಲಿ ಮುಳುಗಿ ಮಿಂದೆದ್ದು ಸಂಭ್ರಮಿಸಿದರು.
ಕೆಲ ಬಡಾವಣೆಯ ಗಲ್ಲಿಗಳಲ್ಲಿ ಡ್ರಮ್‍ಗಳಲ್ಲಿ, ಬಕೆಟ್ ಹಾಗೂ ಬುಟ್ಟಿಗಳಲ್ಲಿ ಬಣ್ಣಗಳನ್ನು ತುಂಬಿ ಪರಸ್ಪರರ ಮೇಲೆ ಎರಚಿ ಸಂತೋಷ, ಸಂಭ್ರಮಪಟ್ಟರು. ಮುಖಕ್ಕೆ ವಿವಿಧ ಬಣ್ಣಗಳನ್ನು ಹಚ್ಚಿ ಕೇಕೆ ಹಾಕಿ ಹೊಯ್ಕೊಳ್ಳುವ ಮೂಲಕ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಎರಡನೇ ಸೋಂಕಿನ ಅಲೆಯು ಹೆಚ್ಚುತ್ತಿರುವುದರಿಂದ ಹಬ್ಬ ಹಾಗೂ ಉತ್ಸವಗಳನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಸಭೆ, ಸಮಾರಂಭಗಳನ್ನು ಸಹ ನಿಷೇಧಿಸಿದೆ. ಆದಾಗ್ಯೂ, ಕೋವಿಡ್ ನಿಯಮಗಳನ್ನು ಪಾಲಿಸಿ ಹಲವೆಡೆ ಹೋಳಿ ಆಚರಿಸಲಾಗುತ್ತಿದೆ.
ಸಂಜೆ ಹಾಗೂ ರಾತ್ರಿ, ಬೆಳಗಿನ ಜಾವ ಕಾಮದಹನ ಕಾರ್ಯಕ್ರಮವನ್ನು ಸಾಂಪ್ರದಾಯಿಕ ರೀತಿಯಲ್ಲಿ ಅಲ್ಲಲ್ಲಿ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಂದು ಸಂಪೂರ್ಣ ಹೋಳಿ ಬಣ್ಣದ ಆಟ ಜರುಗಲಿದ್ದು, ಭಾನುವಾರವೂ ಸಹ ಅನೇಕ ಸಾರ್ವಜನಿಕರು ಮಾರುಕಟ್ಟೆಗೆ ತೆರಳಿ ತಮಗೆ ಬೇಕಾದ ಬಣ್ಣ ಹಾಗೂ ಪಿಚುಕಾರಿಗಳನ್ನು ಖರೀದಿಸಿದರು. ಸಕ್ಕರೆ ಸರಗಳನ್ನು ಸಹ ಖರೀದಿಸುವ ದೃಶ್ಯಗಳು ಕಂಡುಬಂದವು.
ಬಹಿರಂಗವಾಗಿ ಹೋಳಿ ಆಚರಣೆಗೆ ನಿಷೇಧ ಹೇರಿದ್ದರಿಂದ ಹೋಳಿ ಹಬ್ಬಕ್ಕೆ ಕೊರೋನಾ ಕರಿನೆರಳು ಆವರಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *