ಟುಡೇ.. ಇಡ್ಲಿ ಡೇ..! ಇಂದು ಇಡ್ಲಿ ತಿನ್ನುವ ಮೊದಲು ಹೇಳಿ ಹ್ಯಾಪಿ ಬರ್ತ್ಡೇ ಇಡ್ಲಿ…!
ಇಂದು ವಿಶ್ವ ಇಡ್ಲಿ ದಿನ. ಪ್ರತಿ ವರ್ಷ ಮಾರ್ಚ್.30ರಂದು ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿಯನ್ನು ಬೆಳಗಿನ ತಿಂಡಿಯಾಗಿ ಬಳಸಲಾಗುತ್ತದೆ. ಆರೋಗ್ಯಭರಿತವೂ, ರುಚಿಕರವೂ ಆಗಿರುವ ಇಡ್ಲಿಯನ್ನು ಇಷ್ಟಪಡದವರೇ ಇಲ್ಲ. ಇಡ್ಲಿ ಜೊತೆಗೆ ಸಾಂಬಾರ್ ಮತ್ತು ಚಟ್ನಿ ಸೂಪರ್ ಕಾಂಬಿನೇಶನ್.
ದಕ್ಷಿಣ ಭಾರತದ ಜನರ ಬಹು ಪ್ರೀತಿಯ ಆಹಾರ ಇಡ್ಲಿ ಮತ್ತು ಸಾಂಬಾರ್. ಇದು ಅತ್ಯುತ್ತಮ ಪೌಷ್ಟಿಕ ಆಹಾರ ಕೂಡ ಹೌದು. ಬೆಳಗ್ಗಿನ ತಿಂಡಿ ಸಾಕಷ್ಟು ಪ್ರೋಟಿನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ ಒಳಗೊಂಡಿರಬೇಕು. ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿರುವ ಇಡ್ಲಿಯಲ್ಲಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಬೆಳಗ್ಗಿನ ತಿಂಡಿಗೆ ಉತ್ತಮ ಆಯ್ಕೆ.
ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸಾದ ಇಡ್ಲಿಗೆ ದೊಡ್ಡ ಇತಿಹಾಸವೇ ಇದೆ. ಇಡ್ಲಿ ಭಾರತದ ಮೂಲದ್ದು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ವಿಶ್ವ ಇಡ್ಲಿ ದಿನವನ್ನು ಮೊದಲಿಗೆ ಆರಂಭಿಸಿದ್ದು ಚೆನ್ನೈನ ಇನಿಯವಣ್ ಎಂಬವರು. ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವಣ್ ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇಡ್ಲಿ ತಯಾರಿಸುವ ಮಹಿಳೆಯೊಬ್ಬರ ಪರಿಚಯವಾಗಿ, ನಂತರ ಅವರ ಪ್ರೇರಣೆಯಿಂದ ದೊಡ್ಡ ಇಡ್ಲಿ ತಯಾರಿಸಲು ಆರಂಭಿಸಿದರಂತೆ. ಹೀಗೆ ಪ್ರಯೋಗಗಳನ್ನು ನಡೆಸುತ್ತಾ 2000 ವಿಧದ ಇಡ್ಲಿಗಳನ್ನು ತಯಾರಿಸಿ ಇನಿಯವಣ್ ದಾಖಲೆ ಸೃಷ್ಟಿಸಿದ್ದರು. ಈತನ ಈ ಪ್ರಯೋಗಗಳನ್ನು ಗೌರವಿಸಿ ಅಮೆರಿಕದ ವಿವಿಯೊಂದು ಇವರಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿತ್ತು. ಅವರೊಂದಿಗೆ ಕೈ ಜೋಡಿಸಿದ ತಮಿಳುನಾಡು ಕ್ಯಾಟರಿಂಗ್ ಎಂಪ್ಲಾಯ್ಸ್ ಯೂನಿಯನ್‌ನ ಅಧ್ಯಕ್ಷ ರಾಜಾಮಣಿ ಅಯ್ಯರ್ ಅವರು ಮಾರ್ಚ್ 30 ರಂದು ಈ ದಿನ ಆಚರಿಸಲು ನಿರ್ಧರಿಸಿದರು. ಅಂದಿನಿಂದ ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲ, ಇದು ಇನಿಯವಣ್ ಅವರ ಜನ್ಮದಿನವೂ ಹೌದು.