ಸ್ಥಗಿತಗೊಂಡ ಗಣಿಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು ಷರತ್ತು  ಬದ್ಧವಾಗಿ ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಸೋಮವಾರ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಇದಕ್ಕೂ ಮುನ್ನ ಗಣಿಗಳನ್ನು ಪುನರಾರಂಭಿಸುವವರು ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ(ಡಿಜಿಎಂಎಸ್‌) 90 ದಿನಗಳ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಸ್ಫೋಟ ಕಾರಣ ಡಿಜಿಎಂಎಸ್‌ ಪರವಾನಗಿ ಹೊಂದಿಲ್ಲದ ಎಲ್ಲ ಗಣಿಗಳು ಮುಚ್ಚಿವೆ. ಗಣಿಗಳ ಚಟುವಟಿಕೆ ನಿಂತು ಹೋದ ಕಾರಣ ರೂ.300 ಕೋಟಿಗಳಷ್ಟು ಆದಾಯ ನಷ್ಟವಾಗಿದೆ.

ಹಲವು ಗಣಿಗಳಲ್ಲಿ ಕಾರ್ಮಿಕರನ್ನು ತೆಗೆದುಹಾಕಲಾಗಿದೆ. ಕೆಲವರು ಸಾಲ ಮಾಡಿ ಕ್ರಷರ್‌ಗಳನ್ನು ನಡೆಸುತ್ತಿದ್ದಾರೆ. ಸಾಲ ಮರುಪಾವತಿ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ರಷರ್‌ಗಳು ನಿಂತಿರುವುದರಿಂದ ಕಚ್ಚಾ ಸಾಮಗ್ರಿಗಳ ಬೆಲೆ ಮಾರುಕಟ್ಟೆಯಲ್ಲು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿಜಿಎಂಎಸ್‌ ಪರವಾನಗಿ ಪಡೆದು ಗಣಿಗಾರಿಕೆ ನಡೆಸುತ್ತಿರುವ ಗಣಿಗಳ ಸಂಖ್ಯೆ ಶೇ.10 ಇದ್ದು, ಉಳಿದ ಶೇ 90 ರಷ್ಟು ಮಂದಿ ಡಿಜಿಎಂಎಸ್‌ ಪರವಾನಗಿ ಪಡೆದಿಲ್ಲ. ಇಂತಹ ಗಣಿಗಳ ಸಂಖ್ಯೆ 2500 ಕ್ಕೂ ಹೆಚ್ಚು ಇದೆ. ಪರವಾನಗಿ ‍ಪಡೆಯದೇ ಗಣಿ ಪುನರಾರಂಭಿಸಲು ಸಾಧ್ಯವಿಲ್ಲ. ಇವರಿಂದ ಮುಚ್ಚಳಿಕೆ ಬರೆಸಿಕೊಂಡು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುವುದು.

ಎರಡು ಕೆ.ಜಿಯಷ್ಟು ಸ್ಫೋಟಕಗಳನ್ನು ಗಣಿಯಲ್ಲಿ ಬಳಸಲು ಅವಕಾಶ ಇದೆ. ಇದಕ್ಕೆ ಡಿಜಿಎಂಎಸ್‌ನ ಅನುಮತಿ ಬೇಕಿಲ್ಲ. ಸ್ಫೋಟಕ ಬಳಕೆಯಿಲ್ಲದೆಯೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ. ಆದರೆ, ಎನ್ಒಸಿ ಪಡೆಯುವುದು ಕಡ್ಡಾಯವಾಗಿದೆ ಎಂದಿದ್ದಾರೆ.

ಗಣಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಭೇಟಿ ಮಾಡಿ ಗಣಿಗಳ ಪುನರಾರಂಭಕ್ಕೆ ಮನವಿ ಮಾಡಿದರು. ಆ ಬಳಿಕ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಲಾಯಿತು. ಗಣಿಗಳ ಪುನರಾರಂಭಕ್ಕೆ ಅನುಮತಿ ನೀಡಿದರು. ಡಿಜಿಎಂಎಸ್ ಪರವಾನಗಿ ಇಲ್ಲದೆ ಸ್ಫೋಟಕಗಳನ್ನು ಖರೀದಿಸಲು ಸಾಧ್ಯವಿಲ್ಲ. ಅದಕ್ಕಾಗಿ ಮಾರ್ಗಸೂಚಿ ಬದಲಿಸಲು ತೀರ್ಮಾನಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *