ಕಲಬುರಗಿ : ಬಾಕಿಯಿರುವ ನೀರು ಹಾಗೂ ಒಳಚರಂಡಿ ಕರ ಪಾವತಿಗೆ ಮಂಡಳಿಯಿಂದ ಗ್ರಾಹಕರಿಗೆ ಅಂತಿಮ ಅವಕಾಶ
ಕಲಬುರಗಿ : ಬಾಕಿಯಿರುವ ನೀರು, ಒಳಚರಂಡಿ ಕರವನ್ನು ಪಾವತಿಸಲು ಹಾಗೂ ಅನಧೀಕೃತ ಸಂಪರ್ಕಗಳನ್ನು ಅಧಿಕೃತಗೊಳಿಸಲು ಕಲಬುರಗಿ ನಗರದ ಗ್ರಾಹಕರಿಗೆ ಅಂತಿಮ ಅವಕಾಶ ನೀಡಲಾಗಿದ್ದು, ಇಲ್ಲವಾದ್ದಲ್ಲಿ ಮಾರ್ಚ್ 18ರಿಂದ ಬಾಕಿ ಕರ ಇರುವ ಗ್ರಾಹಕರ ಹೆಸರನ್ನು ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟಿಸಿ ಶಾಶ್ವತವಾಗಿ ಗ್ರಾಹಕರ ನೀರು ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಲಬುರಗಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರದ ಸಾರ್ವಜನಿಕರು ಬಾಕಿಯಿರುವ ನೀರು, ಒಳಚರಂಡಿ ಕರವನ್ನು ಹಾಗೂ ಅನಧೀಕೃತ ಸಂಪರ್ಕಗಳನ್ನು ಅಧಿಕೃತಗೊಳಿಸಬೇಕು. ಇಲ್ಲವಾದ್ದಲ್ಲಿ ಗ್ರಾಹಕರಿಗೆ ಮುನ್ಸೂಚನೆಯಿಲ್ಲದೇ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುವುದೆಂದು ಈ ಹಿಂದೆ ಪತ್ರಿಕಾ ಪ್ರಕಟಣೆ ಮೂಲಕ ಗ್ರಾಹಕರಿಗೆ ತಿಳಿಸಲಾಗಿತ್ತು. ಆದಾಗ್ಯೂ ಸಹ ಗ್ರಾಹಕರು ಇದುವರೆಗೆ ಬಾಕಿ ಕರವನ್ನು ಪಾವತಿಸಿರುವುದಿಲ್ಲ ಹಾಗೂ ಅನಧೀಕೃತ ನಳಗಳ ಸಂಪರ್ಕವನ್ನು ಅಧಿಕೃತಗೊಳಿಸಿಕೊಂಡಿರುವುದಿಲ್ಲ.
ಕಲಬುರಗಿ ನಗರದ ಗ್ರಾಹಕರು ನೀರು, ಒಳಚರಂಡಿ ಚಾಲ್ತಿ ಕರವನ್ನು ಪ್ರತಿ ತಿಂಗಳು ತಪ್ಪದೇ ನಿಗದಿತ ಅವಧಿಯೊಳಗೆ ಪಾವತಿಸಬೇಕು. ಇದಲ್ಲದೇ ಬಾಕಿಯಿರುವ ನೀರು/ ಒಳಚರಂಡಿ ಕರವನ್ನು ಸಹ ಪಾವತಿಸಬೇಕು. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಕರ ಪಾವತಿಗಾಗಿ ಕರವಸೂಲಿಗಾರರನ್ನು ನೇಮಿಸಲಾಗಿದೆ. ಮನೆಗೆ ಬರುವ ಕರ ವಸೂಲಿಗಾರರಿಗೆ ಗ್ರಾಹಕರು ಸಹಕರಿಸಿ ನೀರು / ಒಳಚರಂಡಿ ಕರವನ್ನು ಪಾವತಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಸುಪರ್ ಮಾರ್ಕೇಟ್, ಶಹಾಬಜಾರ, ಪಿ ಆ್ಯಂಡ್ ಟಿ ಕಾಲೋನಿ, ಖಾದ್ರಿ ಚೌಕ್, ರಫೀಕ್ ಚೌಕ್ಗಳಲ್ಲಿ ಹಣ ಪಾವತಿಸುವ ಕೌಂಟರ್ಗಳಿದ್ದು, ಈ ಕೌಂಟರ್ಗಳಲ್ಲಿಯೂ ಸಹ ಗ್ರಾಹಕರು ಕರವನ್ನು ಪಾವತಿಸಬಹುದಾಗಿದೆ.
ಕಲಬುರಗಿ ನಗರದಲ್ಲಿ ಮಹಾನಗರ ಪಾಲಿಕೆ/ಮಂಡಳಿ ಅನುಮತಿ ಇಲ್ಲದೆ ಅನಧಿಕೃತವಾಗಿ ನೀರು/ ಒಳಚರಂಡಿ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಅನಧಿಕೃತವಾಗಿ ಸಂಪರ್ಕ ಪಡೆದ ಗ್ರಾಹಕರು ನೀರು/ ಒಳಚರಂಡಿ ಸಂಪರ್ಕಗಳ ಠೇವಣಿ, ಇನ್ನಿತರ ಶುಲ್ಕ ಹಾಗೂ ದಂಡÀವನ್ನು ಪಾವತಿಸಿ ಸಕ್ರಮಗೊಳಿಸಿಕೊಳ್ಳಬೇಕು.
ಗ್ರಾಹಕರು ಹೊಸ ನೀರು, ಒಳಚರಂಡಿ ಸಂಪರ್ಕಕ್ಕಾಗಿ ‘ಜಲನಿಧಿ’: http://www.mrc.gov.in/jalanidhi/index.do ತಂತ್ರಾಂಶದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.