ಶರಣಬಸವೇಶ್ವರರ ದಾಸೋಹ ತತ್ವದಿಂದ ಆರ್ಥಿಕ ಸಮಾನತೆ ಸಾಧ್ಯ

ಪ್ರತಿಯೊಬ್ಬರು ಎಲ್ಲವೂ ತನಗಾಗಲಿಯೆಂಬ ಸ್ವಾರ್ಥ ಮನೋಭಾವನೆ ಮತ್ತು ಅವಶ್ಯಕತೆಗಿಂತ ಅಧಿಕ ಸಂಪತ್ತು ಸಂಗ್ರಹಿಸುವ ಮನೋಭಾವನೆ ತೊಡೆದು, ಇದ್ದದ್ದರಲ್ಲಿಯೇ ತೃಪ್ತಿಪಟ್ಟು, ಇರುವದನ್ನೇ ಎಲ್ಲರೊಂದಿಗೆ ವಿನಿಯೋಗಿಸಿ ಸಹ ಜೀವನ ಸಾಗಿಸಬೇಕೆಂಬ ಮಹಾದಾಸೋಹಿ ಶರಣಬಸವೇಶ್ವರರ ದಾಸೋಹ ತತ್ವವನ್ನು ಅಳವಡಿಸಿಕೊಂಡರೆ, ಜಗತ್ತಿನಲ್ಲಿರುವ ಆರ್ಥಿಕ ಅಸಮಾನತೆ ದೂರವಾಗಿ, ಸಮಾನತೆ ಉಂಟಾಗಲು ಸಾಧ್ಯವಿದೆಯೆಂದು ಅರ್ಥಶಾಸ್ತ್ರ ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ, ಶಿವ ನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ‘ಶರಣಬಸವೇಶ್ವರರ ಜೀವನ ಮತ್ತು ಕೊಡುಗೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಶರಣಬಸವೇಶ್ವರರು ದಾಸೋಹ, ಕಾಯಕ, ಭಕ್ತಿಯನ್ನು ಗೈಯುತ್ತ, ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಇಡೀ ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಶ್ರಮಿಸಿ, ಅಸಂಖ್ಯಾತ ಭಕ್ತರ ಆರಾಧ್ಯ ದೈವರೆನಿಸಿಕೊಂಡಿದ್ದಾರೆ. ಸಕಲ ಜೀವರಾಶಿಗಳಲ್ಲಿ ದೇವರ ಅಸ್ಥಿತ್ವವನ್ನು ಕಂಡು, ನಿರಂತರವಾಗಿ ದಾಸೋಹಗೈಯುವ ಮೂಲಕ ದಾಸೋಹ ಭಾಂಡಾರಿಯಾಗಿ ‘ದಾಸೋಹ’ ಎಂಬ ಶಬ್ದಕ್ಕೆ ಹೊಸ ಭಾಷ್ಯವನ್ನು ಬರೆದಿದ್ದಾರೆಂದರು.
ಶರಣಬಸವೇಶ್ವರರು ರಾಜ ಮನೆತನದಲ್ಲಿ ಜನಿಸಿದವರಲ್ಲ. ಪ್ರಭುತ್ವ ವ್ಯವಸ್ಥೆಯನ್ನು, ಶ್ರೇಷ್ಠ ಅಧಿಕಾರವನ್ನು ಹೊಂದಿದವರಲ್ಲ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಅಸಾಧಾರಣವಾದ ಸಾಧನೆ ಮಾಡಿರುವುದು ಸಾಮಾನ್ಯವಾದ ಸಂಗತಿಯಲ್ಲ. ಕೃಷಿಯ ಬಗ್ಗೆ ಪ್ರಸ್ತುತ ದಿನಗಳಲ್ಲಿ ಅಸಡ್ಡೆ ತೋರುತ್ತಿರುವ ಜನತೆಗೆ ಶರಣರು ಸದಾ ಮಾದರಿಯಾಗಿದ್ದಾರೆ. ಅವರು ದೈವತ್ವವನ್ನು ಪಡೆಯಲು ಮನೆ, ಸಂಸಾರ ಎಲ್ಲವನ್ನು ತ್ಯಜಿಸಿ, ಬೆಟ್ಟ-ಗುಡ್ಡ, ಏಕಾಂತದಲ್ಲಿ ಧ್ಯಾನವನ್ನು ಮಾಡಿದವರಲ್ಲ. ಬದಲಿಗೆ ಸದಾ ಜನತೆಯ ಜೊತೆಯಲ್ಲಿಯೇ ಇದ್ದು ‘ಜನಸೇವೆಯೇ ಜನಾರ್ಧನ ಸೇವೆ’ಯೆಂದು ಭಾವಿಸಿ, ಪರಹಿತದಲ್ಲಿ ಪರಶಿವನನ್ನು ಕಂಡಿದ್ದಾರೆಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಇಡೀ ಸಮಾಜವೇ ತಮ್ಮ ಮನೆ, ಸಮಾಜದಲ್ಲಿರುವ ಎಲ್ಲರೂ ಸಾಕ್ಷಾತ ಶಿವಸ್ವರೂಪಿಗಳು, ಅವರೆಲ್ಲರ ಸೇವೆಯ ಶಿವನ ಪೂಜೆಯೆಂದು ಸಮಾಜಕ್ಕಾಗಿಯೇ ದುಡಿದಿದ್ದರಿಂದಲೇ ಶರಣಬಸವೇಶ್ವರರು ಇಂದಿಗೂ ಕೂಡಾ ಸರ್ವ ಧರ್ಮಗಳ ಆರಾಧ್ಯ ದೈವರಾಗಿದ್ದಾರೆಂದು. ಕಡಕೋಳ ಮಡಿವಾಳಪ್ಪನವರಿಗೆ ಲಿಂಗದೀಕ್ಷೆ ನೀಡದಿರುವ ಸಂದರ್ಭದಲ್ಲಿ ಸ್ವಂತ ಶರಣಬಸವೇಶ್ವರರು ಶಿವದೀಕ್ಷೆಯನ್ನು ಕಲ್ಪಿಸಿ, ಯಾರು ಮೇಲು-ಕೀಳಲ್ಲ, ಎಲ್ಲರೂ ಸರಿ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ದೇವೇಂದ್ರಪ್ಪ ಗಣಮುಖಿ, ರಾಜಕುಮಾರ ಬಟಗೇರಿ, ನಾಗೇಂದ್ರಪ್ಪ ಕಲಶೆಟ್ಟಿ, ಅಮರ ಜಿ.ಬಂಗರಗಿ, ವಿಶ್ವನಾಥ ಶೇಗಜಿ ದಂಗಾಪುರ, ಶಿವಪ್ಪಗೌಡ ಎಸ್.ಪಾಟೀಲ ಬೊಮ್ಮನಳ್ಳಿ, ವಿಶ್ವನಾಥ ಅಂಬಲಗಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *