ಕಲಬುರಗಿ : ಸ್ಟೀಲ್ ಡಬ್ಬಗಳ ಮೂಲಕ ಪಕ್ಷಿಗಳ ದಾಹ ತಣಿಸಲು ಯುವಕರಿಂದ ವಿನೂತನ ಪ್ರಯೋಗ
ಕಲಬುರಗಿ : ಸಿಡಿಲ ನಗರಿ ಖ್ಯಾತಿಯ ಜಿಲ್ಲೆಯಲ್ಲಿ ಬಿಸಿಲಧಗೆಯು ಮನುಕುಲವನ್ನೇ ತಬ್ಬಿಬ್ಬಾಗಿಸುತ್ತಿದೆ. ಈ ಮಧ್ಯೆ, ಪಕ್ಷಿಗಳ ಪಾಡು ಹೇಳತೀರದು. ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿಯ ಜೊತೆಗೆ ಪ್ರಕೃತಿಯ ಒಡಲಲ್ಲಿರುವ ಜೀವಿಗಳನ್ನೂ ಸಹ ರಕ್ಷಿಸುವ ಕೆಲಸ ಮಾಡುವ ಉದ್ದೇಶದಿಂದ ಸ್ಟೇಲ್ ಡಬ್ಬ ತಯಾರಿಸುವ ಕೆಲಸಕ್ಕೆ ಜಿಲ್ಲೆಯ ಸೇಡಂ ಬಳಿ ಇರುವ ಮಳಖೇಡದ ವಿದ್ಯಾರ್ಥಿಗಳ ತಂಡವು ಕೈ ಹಾಕಿದೆ. ಈಗಾಗಲೇ 100 ಡಬ್ಬಗಳನ್ನು ತಯಾರಿಸಿದ್ದೇವೆ ಎಂದು ಸತ್ಯಮೇವ ಜಯತೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ್ ಮಂಗಾ ಅವರು ಹೇಳಿದ್ದಾರೆ.
ಬೇಸಿಗೆ ಕಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಬಿಸಿಲಿನ ತಾಪ ಮಿತಿ ಮೀರಿದೆ. ಪಕ್ಷಿಗಳ ಜೀವ ಕಾಪಾಡಲು ಸೇಡಂ ತಾಲ್ಲೂಕಿನ ಮಳಖೇಡ್ ಗ್ರಾಮದ ಸತ್ಯಮೇವ ಜಯತೆ ವಿದ್ಯಾರ್ಥಿಗಳ ಸಂಘವೊಂದು ಮಾದರಿ ಕಾರ್ಯಕ್ಕೆ ಕೈ ಹಾಕಿದೆ.
ಸತತ 30 ದಿನಗಳಿಂದ ಅಡಿಗೆಗೆ ಬಳಸುವ ಸ್ಟೀಲ್ ಡಬ್ಬಗಳನ್ನು ಸಂಗ್ರಹಿಸಿ, ಅವುಗಳನ್ನು ಪಕ್ಷಿಗಳಿಗೆ ಆಹಾರಧಾನ್ಯ ಮತ್ತು ನೀರುಣಿಸುವ ರೀತಿಯಲ್ಲಿ ವಿದ್ಯಾರ್ಥಿಗಳ ಗುಂಪೊಂದು ಮಾರ್ಪಾಡು ಮಾಡಿದೆ. ಅವುಗಳನ್ನು ಸೇಡಂ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಗಿಡ, ಮನೆಗಳ ಮೇಲ್ಛಾವಣೆ, ಕಂಬಗಳಿಗೆ ಅಳವಡಿಸಿ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಮತ್ತು ಧವಸ ಧಾನ್ಯ ಹಾಕುವ ಮೂಲಕ ಪಕ್ಷಿಗಳಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಕೈ ಜೋಡಿಸಿರುವ ಪೋಲಿಸ್ ಪೇದೆ ಮಲ್ಲಿಕಾರ್ಜುನ್ ಮತ್ತು ಅನೇಕ ಗಣ್ಯರು ಆಹಾರ ಧಾನ್ಯವನ್ನು ದೇಣಿಗೆಯಾಗಿ ನೀಡಿದ್ದಾರೆ.
ಇತ್ತೀಚೆಗೆ ಜರುಗಿದ ಸಮಾರಂಭವೊಂದರಲ್ಲಿ ತಯಾರಿಸಿದ ಡಬ್ಬಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಕಾರ್ಯವನ್ನು ಮಳಖೇಡದ ಕಾರ್ತಿಕೇಶ್ವರ್ ಮಠದ ವೀರಗಂಗಾಧರ್ ಶಿವಾಚಾರ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.