ಕಲಬುರಗಿ : ಅಕ್ರಮವಾಗಿ ಆಂಧ್ರಕ್ಕೆ ಸಾಗಿಸುತ್ತಿದ್ದ 47 ಗೋವುಗಳ ರಕ್ಷಣೆ
ಕಲಬುರಗಿ : ನೆರೆಯ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ನಾಲ್ಕು ಐಷರ್ ವಾಹನಗಳಲ್ಲಿ ಸಾಗಿಸುತ್ತಿದ್ದ 47 ಗೋವುಗಳನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಡೆದು ಗೋಶಾಲೆಗೆ ಕಳಿಸಿದ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಚಿಂಚೋಳಿ ಕ್ರಾಸ್ ಬಳಿ ವರದಿಯಾಗಿದೆ.
ಮಾಹಿತಿಯ ಮೇರೆಗೆ ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ, ಸೇಡಂ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್ ಮುಂತಾದವರು ವಾಹನಗಳನ್ನು ತಡೆದರು. ನಂತರ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ನಾನಾಗೌಡ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಗೋವುಗಳನ್ನು ಗೋಶಾಲೆಗೆ ಕಳಿಸಿಕೊಟ್ಟಿದ್ದು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಗೋವುಗಳನ್ನು ಸೇಡಂ ತಾಲ್ಲೂಕಿನ ಮಳಖೇಡದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾನುವಾರುಗಳ ಸಂತೆಯಲ್ಲಿ ಖರೀದಿಸಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿಬ್ಬಂದಿಗೆ ಲಂಚ ಕೊಟ್ಟು ರಶೀದಿ ಪಡೆದು ದನಗಳನ್ನು ಆಂಧ್ರಪ್ರದೇಶದ ಗುತ್ತಿ ಜಿಲ್ಲೆಗೆ ಸಾಗಿಸಲಾಗುತ್ತಿದೆ. ಇದೊಂದು ದೊಡ್ಡ ಜಾಲವಿದ್ದು, ಈ ಕುರಿತು ತನಿಖೆ ಕೈಗೊಳ್ಳಬೇಕು ಹಾಗೂ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತ್ತಿಗೆ ಒಳಪಡಿಸಬೇಕು ಎಂದು ಶಿವಕುಮಾರ್ ಬೋಳಶೆಟ್ಟಿ ಅವರು ಒತ್ತಾಯಿಸಿದ್ದಾರೆ.
ಮೂಕ ಪ್ರಾಣಿಗಳನ್ನು ತೀರಾ ಹಿಂಸಾತ್ಮಕ ರೂಪದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಒಂದೇ ವಾಹನದಲ್ಲಿ 10ರಿಂದ 12 ದನಗಳನ್ನು ಒತ್ತಾಯಪೂರ್ವಕವಾಗಿ ಕೊಂಡೊಯ್ಯಲಾಗುತ್ತಿತ್ತು. ಪ್ರಾಣಿಗಳನ್ನು ಹಿಂಸಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ಮುಸ್ತಾಜರ್ ಅವರು ಒತ್ತಾಯಿಸಿದ್ದಾರೆ.