ಕಾಳಗಿ : ಹದಗೆಟ್ಟ ಗೋಟೂರು ರಸ್ತೆ: ಸಂಚಾರಕ್ಕೆ ಸಂಚಕಾರ
ಕಾಳಗಿ : ತಾಲ್ಲೂಕಿನ ಗೋಟೂರು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
ಕಲಬುರಗಿಯಿಂದ 30 ಕಿ.ಮೀ. ಮತ್ತು ಕಾಳಗಿಯಿಂದ 5 ಕಿ.ಮೀ.ದೂರವಿರುವ ಗೋಟೂರು ಹಾಗೂ ಕಣಸೂರು ಮಧ್ಯೆ ಬೆಣ್ಣೆತೋರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕಳೆದ ವರ್ಷ ಭಾರೀ ಮಳೆಯ ಕಾರಣ ಹಾಳಾಗಿ ಹೋಗಿದೆ. ಇದರಿಂದಾಗಿ ಗೋಟೂರು ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ಈ ಗ್ರಾಮ ಕಲಬುರಗಿ ಜಿಲ್ಲೆಯಲ್ಲಿದ್ದರೂ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ತಾಲ್ಲೂಕು ಕಾಳಗಿಯಾದರೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಈ ಗ್ರಾಮ ಒಂದು ರೀತಿಯಲ್ಲಿ ರಾಜಕೀಯವಾಗಿ ಅನಾಥವಾದ ಗ್ರಾಮವಾದಂತಾಗಿದೆ.
ಹೀಗಾಗಿ ಈ ಗ್ರಾಮದ ಏಳಿಗೆ ಬಗ್ಗೆ ಯಾರನ್ನೂ ಕೇಳಬೇಕು ಎಂಬ ಗೊಂದಲ ಗ್ರಾಮಸ್ಥರಲ್ಲಿದೆ. ಬೀದರ್ ಸಂಸದರು ಮತ್ತು ಚಿಂಚೋಳಿ ಶಾಸಕರು ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸಹ ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಜನ ನಿತ್ಯ ಸಂಕಷ್ಟ ಪಡುತ್ತಿರುವುದನ್ನು ತಪ್ಪಿಸಬೇಕಿದೆ ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.