ರಾಜ್ಯದಲ್ಲಿ ಇಂದಿನಿಂದ 4ನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನೇಶನ್; 1.66 ಕೋಟಿ ಜನರಿಗೆ ಲಸಿಕೆ ಗುರಿ

ಬೆಂಗಳೂರು(ಏ. 01): ರಾಜ್ಯದಲ್ಲಿ ಇಂದಿನಿಂದ ನಾಲ್ಕನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ಕೆಲಸ ಆರಂಭವಾಗಲಿದೆ. ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರೂ ಕೋವಿಡ್ ಲಸಿಕೆ ಪಡೆಯಬಹುದಾಗಿದೆ. ಸದ್ಯ ಜನರನ್ನು ಆತಂಕದಲ್ಲಿ ಇರಿಸಿರುವ ಕೊರೊನಾ ಸೋಂಕಿನ ಎರಡನೇ ಅಲೆಯ ವಿರುದ್ಧದ ಹೋರಾಟಕ್ಕೆ ನಾಲ್ಕನೇ ಹಂತದ ವ್ಯಾಕ್ಸಿನೇಶನ್ ಹೆಚ್ಚಿನ ವೇಗ ನೀಡುವ ನಿರೀಕ್ಷೆ ಇದೆ.

ಜನವರಿ 16, 2021ರಿಂದ ದೇಶದಾದ್ಯಂತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಸುಮಾರು 39 ಲಕ್ಷಕ್ಕೂ ಹೆಚ್ಚಿನ ಜನರಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 45 ರಿಂದ 59 ವರ್ಷದವರೆಗಿನ ಕೋ ಮಾರ್ಬಿಡಿಟಿಸ್ ಅಥವಾ ಮುಂಚೆಯೇ ಅನಾರೋಗ್ಯ ಇರುವ ವ್ಯಕ್ತಿಗಳು ಸೇರಿದ್ದಾರೆ.

ಈಗ ಮುಂದಿನ ಹಂತವಾಗಿ ಇಂದಿನಿಂದ ರಾಜ್ಯದಲ್ಲಿರುವ ಎಲ್ಲಾ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಜನರು ಸ್ವ ಇಚ್ಛೆಯಿಂದ ಆಗಮಿಸಿ ಲಸಿಕೆ ಪಡೆಯಬೇಕಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಅಥವಾ ಅನಾರೋಗ್ಯಪೀಡಿತ (ಕೋ ಮಾರ್ಬಿಡಿಟಿಸ್ ಇರುವ) ಯಾರೇ ಆದರೂ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 45 ವರ್ಷ ದಾಟಿದ ಸುಮಾರು 1.66 ಕೋಟಿ ಜನರಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಲಸಿಕೆ ವಿತರಣೆ ಆಗಬೇಕಿರುವುದರಿಂದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಸಿದ್ಧವಾಗಿದೆ. ರಾಜ್ಯದಲ್ಲಿ ಈಗಾಗಲೇ ಇರುವ ಕೋವಿಡ್ ಲಸಿಕಾ ಕೇಂದ್ರಗಳ ಜೊತೆಗೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ಕೂಡಾ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದರಿಂದ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಲಿದ್ದು ಲಸಿಕಾ ಕಾರ್ಯಕ್ರಮ ವೇಗ ಪಡೆದುಕೊಳ್ಳಲಿದೆ.

ರಾಜ್ಯದಲ್ಲಿ ಒಟ್ಟು 5500 ಲಸಿಕಾ ಕೇಂದ್ರಗಳು ಅಗತ್ಯ ಲಸಿಕೆ, ಉಪಕರಣಗಳು ಮತ್ತು ಸಿಬ್ಬಂದಿಯೊಂದಿಗೆ ಸಜ್ಜಾಗಿವೆ. ಈ ಮೊದಲಿನಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಯುಪಿಎಚ್​ಸಿ, ಸಿಎಚ್​​ಸಿ, ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವಿಕೆ ಮುಂದುವರೆಯಲಿದೆ. ಇದಲ್ಲದೇ ಸರ್ಕಾರೇತರ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳು ಬೆಂಬಲದೊಂದಿಗೆ ಮತ್ತಷ್ಟು ಕಡೆ ಲಸಿಕೆ ವಿತರಣೆ ನಡೆಯುವಂತೆ ನೋಡಿಕೊಳ್ಳಲು ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕಳಿಸಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಭ್ಯ:ರಾಜ್ಯದಲ್ಲಿ ಸದ್ಯ 13.5 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 1.5 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಭ್ಯವಿದ್ದು ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಜಿಲ್ಲೆಗಳ ಕೋಲ್ಡ್ ಸ್ಟೋರೇಜ್ ಘಟಕಗಳಿಗೆ ಲಸಿಕೆಗಳ ಸರಬರಾಜು ಆಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪ್ರತಿದಿನ ಇಂತಿಷ್ಟು ಎಂದು ಅಗತ್ಯಕ್ಕೆ ತಕ್ಕಂತೆ ಲಸಿಕೆಗಳನ್ನು ಪೂರೈಸುವುದಾಗಿ ಕೇಂದ್ರ ಸರ್ಕಾರವೂ ಭರವಸೆ ಕೊಟ್ಟಿದೆ.

ಇದಲ್ಲದೇ ಮುಂದಿನ ಹಂತದ ವ್ಯಾಕ್ಸಿನೇಶನ್ ಗಳಿಗಾಗಿ ಈಗಾಗಲೇ ದೊಡ್ಡ ತಂಡವನ್ನು ಸಜ್ಜುಗೊಳಿಸಲಾಗ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು, ವೈದ್ಯಕೀಯ ಅಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು, ಮಧ್ಯಮ ವರ್ಗದ ಆರೋಗ್ಯ ಪೂರೈಕೆದಾರರು, ಆಶಾ ಕಾರ್ತಯಕರ್ತೆಯರಿಗೂ ಲಸಿಕೆಯ ಬಗ್ಗೆ ಅಗತ್ಯ ತರಬೇತಿ ನೀಡಲಾಗ್ತಿದೆ.

ರಾಜ್ಯ ಸರ್ಕಾರವಂತೂ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಪಣತೊಟ್ಟಿದೆ. ಜನರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಲಸಿಕೆ ಪಡೆದರಷ್ಟೇ ಇದು ಸಾಧ್ಯವಾಗುತ್ತದೆ. ಸದ್ಯ ಕೋವಿನ್ ಪೋರ್ಟಲ್ ಮತ್ತು ಆರೋಗ್ಯ ಸೇತು ಆಪ್ ಗಳಲ್ಲಿ ಲಸಿಕೆ ಪಡೆಯುವ ದಿನಾಂಕವನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಇಲ್ಲದಿದ್ದರೆ ನೇರವಾಗಿ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಲೂ ಅವಕಾಶವಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *