CoronaVirus: ಬಾರ್, ಮಾಲ್ ಗಳಿಗಿಲ್ಲದ ಕೊರೋನಾ ನಿರ್ಬಂಧಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಏಕೆ?

ವಿಜಯಪುರ: ಬಾರುಗಳು, ಸಿನಿಮಾ ಮಂದಿರಗಳು, ಮಾಲ್ ಗಳು ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನೀಡಿದ ಅನುಮತಿಯಂತೆ ಜಾತ್ರೆಗಳು ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೂ ನೀಡಬೇಕು ಎಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್​ ಅವರನ್ನು ಅಪ್ಪು ಪಟ್ಟಣಶೆಟ್ಟಿ ಮತ್ತು ಇತರ ಮುಖಂಡರು ಭೇಟಿ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕಾಗಿ ಸರಕಾರ ರಾಜ್ಯಾದಂತ ಲಾಕ್‌ಡೌನ ಮಾಡಿತ್ತು. ಅಲ್ಲದೇ, ರಾಜ್ಯದಲ್ಲಿ ನಡೆಯುವ ಎಲ್ಲಾ ಜಾತ್ರೆಗಳು, ಮದುವೆ ಸಮಾರಂಭ ಧಾರ್ಮಿಕ ಕಾರ್ಯಕ್ರಮ, ಶಾಲಾ ಕಾಲೇಜುಗಳು, ಮಾಲ್ ಗಳು, ಸಿನೇಮಾ ಮಂದಿರಗಳು, ರೇಲ್ವೆ, ಬಸ್ಸುಗಳು ಹಾಗೂ ಬಾರ ಆ್ಯಂಡ್ ರೆಸ್ಟೋರೆಂಟ್ ಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲವೂ ಬಂದ ಆಗಿದ್ದವು. ಆದರೆ, ಕೊರೊನಾ ನಿಯಂತ್ರಣದ ನಂತರ ಎಲ್ಲ ಉದ್ಯಮಗಳು ಮತ್ತು ಹೋಟೆಲಗಳು, ಬಾರುಗಳು, ಮಾಲ್ ಗಳು ಪುನಾರಂಭವಾಗಿವೆ.  ಜನರೂ ಕೂಡ ಎಂದಿನಂತೆ ವ್ಯವಹಾರ ನಡೆಸುತ್ತಿದ್ದಾರೆ. ಜಾತ್ರೆಗಳು, ದಾಸೋಹಗಳು, ಧಾರ್ಮಿಕ ಕಾರ್ಯಕ್ರಮಗಳೂ ಪ್ರಾರಂಭವಾಗಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದವು.  ಈಗ ಸರಕಾರ ಏಕಾಏಕಿ 15 ದಿನಗಳವರೆಗೆ ಜಾತ್ರೆ ಹಾಗೂ ಧಾರ್ಮಿಕ ಸಮಾರಂಭಗಳು, ಮೇಳಗಳನ್ನು ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.  ಇದು ಸರಿಯಲ್ಲ ಎಂದು ಅವರು ತಿಳಿಸಿದರು.

ಧಾರ್ಮಿಕ ಪದ್ಧತಿಯಂತೆ ಮದುವೆಗಳು ನಿಗದಿಯಂತೆ ಅದೇ ದಿನ ನಡೆಯಲೇಬೇಕು.  ಅಲ್ಲದೇ, ಕಳೆದ ಒಂದು ವರ್ಷದಿಂದ ಎಲ್ಲಿಯೂ ಕೂಡ ಜಾನುವಾರು ಜಾತ್ರೆ ನಡೆಸಿರುವುದಿಲ್ಲ.  ಇದರಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ.  ಉತ್ತರ ಕರ್ನಾಟಕ ಭಾಗದಲ್ಲಿ ಈ ಸಮಯದಲ್ಲಿ ಹೆಚ್ಚು ಜಾತ್ರೆಗಳು ನಡೆಯುತ್ತಿದ್ದು ರೈತರು ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಕೊರೋನಾ ನಿಯಮ‌ ಪಾಲನೆಯ ಮಾಡುವ ಮೂಲಕ ಜಾತ್ರೆ, ಧಾರ್ಮಿಕ ಕಾರ್ಯಕ್ರಮ‌ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸಿನಿಮಾ ರಂಗದವರು ಮನವಿ ಮಾಡಿದ ತಕ್ಷಣ ಎಲ್ಲ ಥೇಟರ್ ಗಳಲ್ಲಿ ಶೇ. 100 ರಷ್ಟು ಜನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.  ಅಲ್ಲದೇ, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.  ಮಾಲ್ ಗಳೂ ಓಪನ್ ಆಗಿವೆ.  ಇಂಥ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಆಚರಣೆಗಳಿಗೆ ಕಡಿವಾಣ ಹಾಕುವುದು ಸರಿಯಲ್ಲ.  ಸಿಎಂ ಕೂಡ ದೈವ ಭಕ್ತರಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ಮದುವೆಗಳು ನಡೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *