ಕಲಬುರಗಿ : ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಹಣ ಹಂಚುತ್ತಿದೆ: ಶಿವಕುಮಾರ ಆರೋಪ

ಕಲಬುರಗಿ : ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರಗಳಲ್ಲಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ನೋಡಿ ಬಿಜೆಪಿಯವರು ಹಣ ಹಂಚುತ್ತಿದ್ದಾರೆ. ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು ಹಾಗೂ ಅಭ್ಯರ್ಥಿಯನ್ನು ಅನರ್ಹ ಮಾಡುವುದರ ಜೊತೆಗೆ ಅವರನ್ನು ಬಂಧಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
ಬಸವಕಲ್ಯಾಣ ಕ್ಷೇತ್ರಕ್ಕೆ ತೆರಳಲು ನಗರದಲ್ಲಿ ಶುಕ್ರವಾರ ವಿಮನದಲ್ಲಿ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣ ಹಂಚಿಕೆ ಕುರಿತಂತೆ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ನಮ್ಮ ಕಾರ್ಯಕರ್ತರು ಈ ಕುರಿತು ದೂರು ನೀಡುತ್ತಾರೆ ಎಂದರು.
ನನ್ನ ಮತವನ್ನೇ ಈ ಹಿಂದೆ ಅನರ್ಹ ಮಾಡಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಬಿಜೆಪಿ ಎಜೆಂಟರಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ ಗೊತ್ತಿಲ್ಲ. ಈಗ ಎಲ್ಲ ಅಧಿಕಾರಿಗಳು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಅವರು ಎಚ್ಚರಿಸಿದರು.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಬಾಳ್ ಅವರಿಗೆ ಈವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಯತ್ನಾಳ್ ಅವರೂ ಸೇರಿದಂತೆ ಅನೇಕರು ಸ್ವಪಕ್ಷದಲ್ಲಿಯೇ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಹೇಳಿದ್ದು ತಪ್ಪು ಎಂದು ಯಾರೂ ಹೇಳಿಲ್ಲ. ರಾಜ್ಯ ಹಾಗೂ ರಾಷ್ಟ್ರ ನಾಯಕರಲ್ಲಿ ಯಾರೊಬ್ಬರೂ ಸಹ ಈ ಕುರಿತು ಮಾತನಾಡುತ್ತಿಲ್ಲ. ಹಾಗಾದರೆ ಅವರ ಹೇಳಿಕೆಗಳು ಸರಿಯಿರಬೇಕು ಎಂದು ಯತ್ನಾಳ್ ಅವರ ಪರ ಶಿವಕುಮಾರ್ ಅವರು ಬ್ಯಾಟ್ ಬೀಸಿದರು.
ಮಹಾಮಾರಿ ಕೊರೋನಾ ನಿಯಂತ್ರಿಸಲು ನೈಟ್ ಕಫ್ರ್ಯೂನಿಂದ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಘೋಷಣೆ ಹಾಗೂ ವಿಚಾರಗಳು ನಿಷ್ಪ್ರಯೋಜಕವಾಗಿವೆ. ಇದರಿಂದ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ ಹೊರತು ಮತ್ತೇನೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಅಲ್ಲಮಪ್ರಭು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *