Petrol Price Today: ಕೊರೋನಾ ಸಂಕಷ್ಟದ ನಡುವೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ
ನವದೆಹಲಿ, ಮೇ 5: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಇದರಿಂದ ಕೊರೋನಾದ ಹುಟ್ಡಡಗಿಸಲು ಮತ್ತೆ ಲಾಕ್ಡೌನ್ ಮಾಡಲೇಬೇಕಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ. ಆದರೆ ಇವೆಲ್ಲದರ ನಡುವೆ ಕೊರೋನಾ ಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ನಿನ್ನೆ (ಮೇ 4ರಂದು) ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿತ್ತು. ಇವತ್ತು ಮತ್ತೆ ಬಡ ದೇಶವಾಸಿಗೆ ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ ಬೆಲೆ ಏರಿಸಿ ಬರೆ ಎಳೆದಿದೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ. ಬೆಂಗಳೂರು- ಪೆಟ್ರೋಲ್ 93.77 ರೂ., ಡೀಸೆಲ್ 86.01 ರೂ., ಭೂಪಾಲ್- ಪೆಟ್ರೋಲ್ 98.75 ರೂ., ಡೀಸೆಲ್ 89.38 ರೂ., ಮುಂಬೈ- ಪೆಟ್ರೋಲ್ 97.12 ರೂ., ಡೀಸೆಲ್ 88.19 ರೂ., ಜೈಪುರ – ಪೆಟ್ರೋಲ್ 97.12 ರೂ., ಡೀಸೆಲ್ 89.61 ರೂ., ಪಾಟ್ನಾ- ಪೆಟ್ರೋಲ್ 93.03 ರೂ., ಡೀಸೆಲ್ 86.33 ರೂ., ಚೆನ್ನೈ- ಪೆಟ್ರೋಲ್ 92.70 ರೂ., ಡೀಸೆಲ್ 86.09 ರೂ., ಕೋಲ್ಕತ್ತಾ- ಪೆಟ್ರೋಲ್ 90.92 ರೂ., ಡೀಸೆಲ್ 83.98 ರೂ., ದೆಹಲಿ- ಪೆಟ್ರೋಲ್ 90.74 ರೂ., ಡೀಸೆಲ್ 81.12 ರೂ., ಲಕ್ನೋ- ಪೆಟ್ರೋಲ್ 88.97 ರೂ., ಡೀಸೆಲ್ 81.51 ರೂ., ರಾಂಚಿ- ಪೆಟ್ರೋಲ್ 88.18 ರೂ., ಡೀಸೆಲ್ 85.72 ರೂ. ಆಗಿದೆ.
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೂಡ ‘ಕೊರೋನಾ ನಿಯಂತ್ರಿಸಲು ಈಗ ಲಾಕ್ಡೌನ್ ಒಂದೇ ಪರಿಹಾರ. ಲಾಕ್ಡೌನ್ ಮಾಡುವ ಜೊತೆಗೆ ಬಡವರ ಖಾತೆಗೆ ನೇರವಾಗಿ ಹಣ ನೀಡುವ ‘ನ್ಯಾಯ್’ (NYAY) ಯೋಜನೆಯನ್ನು ಜಾರಿಗೊಳಿಸಿ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಈ ಕಷ್ಟ ಕಾಲದಲ್ಲಿ ಜನರ ಜೇಬಿಗೆ ದುಡ್ಡು ಕೊಡಿ ಎಂದು ಹೇಳಿದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಹೊರಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯ ಮರೆತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದೆ.