ಆಕ್ಸಿಜನ್ ಒದಗಿಸಿ ಜೀವ ಉಳಿಸಿ ಎಂದು ಕೈಮುಗಿದು ಸರ್ಕಾರಕ್ಕೆ ಕೇಳಿದ ಶಾಸಕ ಪ್ರಿಯಾಂಕ್ ಖರ್ಗೆ
ಕಲಬುರಗಿ : ಈಗಲಾದರೂ ಸಹ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಆಕ್ಸಿಜನ್ ಒದಗಿಸುವ ಮೂಲಕ ಜನರ ಜೀವ ಉಳಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುವೆ ಎಂದು ಶಾಸಕ ಹಾಗೂ ಮಾಜಿ ಸಚಿವರೂ ಆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.
ಅಫಜಲಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಅಸುನೀಗಿದ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅಫಜಲಪುರದಲ್ಲಿ ನಡೆದ ಘಟನೆ ಒಂದೇ ಅಲ್ಲ. ಈ ಹಿಂದೆಯೂ ಸಹ ಹಲವಾರು ಘಟನೆಗಳು ಸಹ ಆಕ್ಸಿಜನ್ ಕೊರತೆಯಿಂದ ಉಂಟಾಗಿದೆ. ಆದಾಗ್ಯೂ, ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕಲಬುರ್ಗಿಗೆ ಬಂದ ದಿನವೇ ಖಾಜಾ ಬಂದೇ ನವಾಜ್ ,ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೂವರು ಅಸುನೀಗಿದರು. ನಂತರ ಮತ್ತೊಂದು ಆಸ್ಪತ್ರೆಯಲ್ಲಿ ಐವರು ಅಸುನೀಗಿದರು. ಆದಾಗ್ಯೂ, ಸಹ ಸರ್ಕಾರವು ಆ ಕುರಿತು ವರದಿ ಮಾಡಿಲ್ಲ. ಇಂತಹ ಸಾವುಗಳು ಮುಂದುವರೆಯಬಾರದು. ಕೂಡಲೇ ಆಕ್ಸಿಜನ್ ಒದಗಿಸುವ ಮೂಲಕ ಜೀವ ಉಳಿಸಬೇಕು ಎಂದು ಅವರು ಕೋರಿದರು.
ನಾನು ಈ ಹಿಂದೆಯೇ ಆಕ್ಸಿಜನ್ ಕೊರತೆ ನೀಗಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕಾರು ಪತ್ರಗಳನ್ನು ಬರೆದೆ. ಮುಖ್ಯಮಂತ್ರಿಗಳಿಗೂ ಮನವಿ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಬರೆದಿದ್ದಲ್ಲದೇ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆಯುವಂತೆಯೂ ಸಹ ಕೋರಿದ್ದೆ. ಆ ಎಲ್ಲ ಮನವಿಗಳನ್ನು ಇಲ್ಲಿಯವರೆಗೆ ರಾಜ್ಯ ಸರ್ಕಾರವು ಪರಿಗಣಿಸಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.