ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳ ಸಾವು, ಹತ್ಯಾಕಾಂಡಕ್ಕಿಂತ ಕಡಿಮೆಯಲ್ಲ: ಹೈಕೋರ್ಟ್
ಹೈಲೈಟ್ಸ್:
- ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು
- ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾಯುವುದು ಅಪರಾಧ ಕೃತ್ಯ
- ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಪರಿಗಣಿಸಿದ ಹೈಕೋರ್ಟ್
- ರೋಗಿಗಳ ಸಾವಿನ ಬಗ್ಗೆ ತನಿಖೆಗೆ ಆದೇಶ
ಅಲಹಾಬಾದ್: ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗದ ಕಾರಣದಿಂದಲೇ ಕೋವಿಡ್ 19 ರೋಗಿಗಳು ಸಾಯುತ್ತಿರುವ ಘಟನೆಗಳು ಅಪರಾಧ ಕೃತ್ಯ ಎಂದು ಪರಿಗಣಿಸಿರುವ ಅಲಹಾಬಾದ್ ಹೈಕೋರ್ಟ್, ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇದು ಆಕ್ಸಿಜನ್ ಪೂರೈಕೆ ಸರಪಣಿಯನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ನಡೆಸುವ ಹತ್ಯಾಕಾಂಡ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ.
ಉತ್ತರ ಪ್ರದೇಶದ ಮೀರತ್ ಮತ್ತು ಲಕ್ನೋ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ 19 ರೋಗಿಗಳು ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಈ ಘಟನೆಗಳ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ಕ್ವಾರೆಂಟೈನ್ ಕೇಂದ್ರಗಳ ಪರಿಸ್ಥಿತಿಯ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾಚರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
‘ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಆಗದ ಕಾರಣದಿಂದಲೇ ಕೋವಿಡ್ ರೋಗಿಗಳು ಸಾವಿಗೀಡಾಗುತ್ತಿರುವ ಘಟನೆಗಳನ್ನು ನೋಡಲು ನೋವಾಗುತ್ತದೆ. ಇದು ಅಪರಾಧ ಕೃತ್ಯ ಹಾಗೂ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಖರೀದಿಸಬೇಕಾದ ಹಾಗೂ ಪೂರೈಕೆ ಸರಪಣಿ ನಿಭಾಯಿಸುವುದನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳು ನಡೆಸಿದ ಹತ್ಯಾಕಾಂಡಕ್ಕಿಂತ ಕಡಿಮೆಯೇನಲ್ಲ’ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
‘ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ಸುದ್ದಿಗಳ ಬಗ್ಗೆ ತನಿಖೆ ನಡೆಸುವಂತೆ ಸಾಮಾನ್ಯವಾಗಿ ನಾವು ರಾಜ್ಯ ಮತ್ತು ಜಿಲ್ಲಾಡಳಿತಗಳಿಗೆ ಸೂಚಿಸುವುದಿಲ್ಲ. ಆದರೆ ಅಂತಹ ಸುದ್ದಿಗಳನ್ನು ಅನುಮೋದಿಸುವಂತಹ ಪಿಐಎಲ್‌ನೊಂದಿಗೆ ವಕೀಲರು ಹಾಜರಾಗಿರುವಾಗ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿಲ್ಲ ಎಂದು ವಿವರಿಸಿರುವಾಗ ಸರ್ಕಾರವು ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸುವುದು ಅನಿವಾರ್ಯವಾಗಿದೆ’ ಎಂದು ಕೋರ್ಟ್ ಹೇಳಿದೆ.