Karnataka Lockdown: ಕರ್ನಾಟಕದಲ್ಲಿ ಲಾಕ್​ಡೌನ್ ಘೋಷಣೆ?; ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ ಮಹತ್ವದ ಸಭೆ

ಬೆಂಗಳೂರು (ಮೇ 7): ಕರ್ನಾಟಕದಲ್ಲಿ ಕೊರೋನಾ ಬಿಕ್ಕಟ್ಟು ಕೈ ಮೀರಿ ಹೋಗಿದ್ದು, 2 ದಿನಗಳ ಹಿಂದೆ 50 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸುಗಳು ಪತ್ತೆಯಾಗಿದ್ದವು. ನಿನ್ನೆ ಒಂದೇ ದಿನ ಮತ್ತೆ 49,058 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಜನತಾ ಕರ್ಫ್ಯೂ ಬದಲಾಗಿ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡದಿದ್ದರೆ ಜೂನ್ ವೇಳೆಗೆ ಬೆಂಗಳೂರೊಂದರಲ್ಲೇ 33 ಲಕ್ಷ ಕೊರೋನಾ ಕೇಸುಗಳು ಉಂಟಾಗುವ ಸಾಧ್ಯತೆಯಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು, ಇಂದು ಸಂಜೆ ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯ ಬಳಿಕ ಕರ್ನಾಟಕದಲ್ಲಿ ಲಾಕ್​ಡೌನ್ ಮುಂದುವರೆಯುವ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ.

ಈಗಾಗಲೇ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಬಿಜೆಪಿ ಪಕ್ಷದ ಕೆಲವು ನಾಯಕರೇ ಬಹಿರಂಗವಾಗಿ ಲಾಕ್​ಡೌನ್ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಹೀಗಾಗಿ, ಈ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ ಕೋವಿಡ್ ಉಸ್ತುವಾರಿ ಸಚಿವರು, ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಲಾಕ್​ಡೌನ್ ಸೇರಿದಂತೆ ಇನ್ನಷ್ಟು ಮುಖ್ಯ ವಿಚಾರಗಳ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಈಗಾಗಲೇ ನೆರೆಯ ರಾಜ್ಯವಾದ ಕೇರಳದಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಕರ್ನಾಟಕಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳನ್ನು ಹೊಂದಿರುವ ಕೇರಳದಲ್ಲಿ ಲಾಕ್​ಡೌನ್ ಘೋಷಿಸಿರುವುದರಿಂದ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ

ಸದ್ಯಕ್ಕೆ ಜಾರಿಯಲ್ಲಿರುವ ಸೆಮಿ ಲಾಕ್​ಡೌನ್ / ಜನತಾ ಕರ್ಫ್ಯೂ ಮೇ 12ಕ್ಕೆ ಕೊನೆಯಾಗಲಿದೆ. ತಜ್ಞರು ನೀಡಿರುವ ವರದಿ ಪ್ರಕಾರ ಒಟ್ಟು 30 ದಿನಗಳ ಕಾಲ ಲಾಕ್​ಡೌನ್ ಘೋಷಣೆ ಮಾಡದಿದ್ದರೆ ಸೋಂಕಿನ ಚೈನ್ ಲಿಂಕ್ ಕಟ್ ಮಾಡುವುದು ಕಷ್ಟವಾಗಲಿದೆ. ಮುಂಬೈನಲ್ಲಿ ಲಾಕ್ ಡೌನ್ ನಿಂದ ಕೋವಿಡ್ ಕಂಟ್ರೋಲ್ ಗೆ ಬಂದಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಮಿತಿ ಮೀರುತ್ತಿದೆ. ಹಾಗೇ, ಉಳಿದ 10 ಜಿಲ್ಲೆಗಳಲ್ಲಿ ಕೂಡ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಜನತಾ ಕರ್ಫ್ಯೂ ವಿಫಲವಾಗಿದೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಸಮಸ್ಯೆ, ಬೆಡ್ , ಐಸಿಯು, ವೆಂಟಿಲೇಟರ್ ಸಮಸ್ಯೆ ದಿನೇ ದಿನೇ ದ್ವಿಗುಣವಾಗುತ್ತಿದೆ. ಹೀಗಾಗಿ, ಸರ್ಕಾರ ಜನತಾ ಕರ್ಫ್ಯೂ ಅನ್ನೇ ಮತ್ತಷ್ಟು ಬಿಗಿಗೊಳಿಸುತ್ತದೆಯಾ? ಅಥವಾ ಮೇ 12ರ ಬಳಿಕ ಲಾಕ್ ಡೌನ್ ಘೋಷಣೆ ಮಾಡುತ್ತದಾ? ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ನಿನ್ನೆ 49,058 ಕೊರೋನಾ ಕೇಸುಗಳು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ 328 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 23 ಸಾವಿರ ದಾಟಿದ್ದು, ನಿನ್ನೆ 23,706 ಕೊರೋನಾ ಕೇಸುಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 139 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ.

ಸದ್ಯದ ಕೋವಿಡ್ ಸೋಂಕಿತರ ಸಂಖ್ಯೆಯ ಏರಿಕೆಯ ಅಂಕಿ- ಅಂಶ ಆಧರಿಸಿ ಐಐಎಸ್​ಸಿ ಅಧ್ಯಯನ ವರದಿ ನೀಡಿದೆ. ಬೆಂಗಳೂರಲ್ಲಿ ಲಾಕ್​ಡೌನ್ ಮಾಡದಿದ್ದರೆ ಜೂನ್ ವೇಳೆಗೆ 33 ಲಕ್ಷ ಕೇಸ್ ದಾಖಲಾಗುತ್ತದೆ. ಅಲ್ಲದೆ, 24,174 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇನ್ನೂ 15 ದಿನಗಳ ಕಾಲ ಕಠಿಣ ಲಾಕ್​ಡೌನ್ ಮಾಡದಿದ್ದರೆ ಜೂನ್ 11ರ ವೇಳೆಗೆ 17 ಲಕ್ಷ ಕೊರೋನಾ ಕೇಸುಗಳು ದಾಖಲಾಗುವ ಸಾಧ್ಯತೆಗಳಿವೆ. 15 ದಿನಗಳ ಲಾಕ್​ಡೌನ್ ಮಾಡದಿದ್ದರೆ 15,888 ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ. ಮೇ 4ರ ವೇಳೆಗೆ ಬೆಂಗಳೂರಿನಲ್ಲಿ 8.71 ಲಕ್ಷ ಮಂದಿಗೆ ಸೋಂಕು ತಗುಲಲಿದೆ ಮತ್ತು 7,102 ಮಂದಿ ಸಾವನ್ನಪ್ಪಲಿದ್ದಾರೆ ಎಂದು ತಜ್ಞರು ಈ ಹಿಂದೆ ಅಂದಾಜಿಸಿದ್ದರು. ಆ ವರದಿ ಈವರೆಗೆ ನಿಜವಾಗಿದೆ. ಹೀಗಾಗಿ, ಇದೀಗ ನೀಡಿರುವ ವರದಿ ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ತಲೆನೋವು ತಂದಿಟ್ಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *