ಕೋವಿಡ್‌ನಿಂದ ಹೆಚ್ಚುತ್ತಿದೆ ‘ಬ್ಲಾಕ್ ಫಂಗಸ್’: ಏನಿದು ಮಾರಣಾಂತಿಕ ಸೋಂಕು?
ಹೈಲೈಟ್ಸ್:
- ಕೋವಿಡ್‌ನಿಂದ ಹೆಚ್ಚುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣ
- ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಹಲವು ಪ್ರಕರಣ ಪತ್ತೆ
- ಮದುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಯುಳ್ಳ ಕೋವಿಡ್ ರೋಗಿಗಳಲ್ಲಿ ಹೆಚ್ಚು
- ಅಪರೂಪದ ಆದರೆ ಮಾರಣಾಂತಿಕ ಕಪ್ಪು ಶಿಲೀಂದ್ರ ಸೋಂಕು
ಹೊಸದಿಲ್ಲಿ: ಕೋವಿಡ್ ಕಾರಣದಿಂದ ಮ್ಯುಕೊರ್ಮಿಕಿಸಿಸ್ (ಗಂಭೀರ ಹಾಗೂ ಅಪರೂಪದ ಫಂಗಲ್ ಸೋಂಕು) ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವುದನ್ನು ದೆಹಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಪತ್ತೆಹಚ್ಚಿದ್ದಾರೆ.
ಮ್ಯುಕೊರ್ಮಿಕಿಸಿಸ್ ಎನ್ನುವುದು ಒಂದು ಶಿಲೀಂದ್ರ ಸೋಂಕಾಗಿದ್ದು, ಕೋವಿಡ್-19ನಿಂದ ಪ್ರಚೋದಿತಗೊಳ್ಳುತ್ತಿದೆ. ಇದಕ್ಕೆ ಕಪ್ಪು ಶೀಲೀಂದ್ರ ಎಂದೂ ಕರೆಯಲಾಗುತ್ತದೆ. ಈ ಶೀಲೀಂದ್ರವು ಬಹು ದೀರ್ಘಕಾಲದಿಂದಲೂ ಕಸಿ ಶಸ್ತ್ರಚಿಕಿತ್ಸಾಗಾರ, ಐಸಿಯುದಲ್ಲಿರುವ ರೋಗಿಗಳು ಮತ್ತು ಪ್ರತಿರಕ್ಷಣೆಯ ಕೊರತೆಯುಳ್ಳ ರೋಗಿಗಳಲ್ಲಿ ಕಾಯಿಲೆ ಹಾಗೂ ಸಾವಿಗೂ ಕಾರಣವಾಗುತ್ತಿದೆ.
‘ಕೋವಿಡ್ 19 ನಿಂದ ಪ್ರಚೋದಿತಗೊಂಡ ಈ ಅಪಾಯಕಾರಿ ಶಿಲೀಂದ್ರ ಸೋಂಕಿನಲ್ಲಿ ಹೆಚ್ಚಳವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ದಿನಗಳಲ್ಲಿ ನಾವು ಮ್ಯುಕೊರ್ಮಿಕಿಸಿಸ್‌ನ ಆರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಕಳೆದ ವರ್ಷ ಈ ಮಾರಣಾಂತಿಕ ಸೋಂಕು, ದೃಷ್ಟಿ ಸಾಮರ್ಥ್ಯ ಕಳೆದುಕೊಂಡಿದ್ದ, ಮೂಗು ಹಾಗೂ ದವಡೆ ಮೂಳೆಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನೇಕ ರೋಗಿಗಳಲ್ಲಿ ಅಧಿಕ ಸಾವಿಗೆ ಕಾರಣವಾಗಿತ್ತು’ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಇಎನ್‌ಟಿ ಸರ್ಜನ್ ಡಾ. ಮನೀಶ್ ಮುಂಜಲ್ ತಿಳಿಸಿದ್ದಾರೆ.
ಅನೇಕ ಕೊರೊನಾ ವೈರಸ್ ರೋಗಿಗಳು ಮದುಮೇಹ ಹೊಂದಿರುವುದರಿಂದ ಕೋವಿಡ್ 19ರ ಚಿಕಿತ್ಸೆಯಲ್ಲಿ ಸ್ಟೆರಾಯ್ಡ್ ಬಳಕೆ ಮಾಡಲಾಗುತ್ತಿದೆ. ಬ್ಲಾಕ್ ಫಂಗಸ್ ಪ್ರಕರಣಗಳಲ್ಲಿ ಪುನಃ ಏರಿಕೆಯಾಗಿರಲು ಇದೂ ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು ಎಂದು ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಅಜಯ್ ಸ್ವರೂಪ್ ಹೇಳಿದ್ದಾರೆ.
ಈ ಸೋಂಕು ಕೋವಿಡ್ 19ರಿಂದ ಚೇತರಿಸಿಕೊಂಡ, ಆದರೆ ಮದುಮೇಹ, ಮೂತ್ರಪಿಂಡ, ಹೃದ್ರೋಗ ಅಥವಾ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಈ ಸೋಂಕು ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಾರಕ ಸೋಂಕನ್ನು ಎದುರಿಸುವ ಸಲುವಾಗಿ ಕೋವಿಡ್ ರೋಗಿಗಳ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಮೂಗು ಕಟ್ಟುವಿಕೆ, ಕಣ್ಣು ಅಥವಾ ಕೆನ್ನೆ ಊದಿಕೊಳ್ಳುವಿಕೆ ಅಥವಾ ಮೂಗಿನಲ್ಲಿ ಕಪ್ಪು ಪದರಗಳು ರೂಪುಗೊಳ್ಳುವಂತಹ ಲಕ್ಷಣಗಳು ಆರಂಭದಲ್ಲಿ ಕಂಡುಬಂದರೆ ಕೂಡಲೇ ಬಯಾಪ್ಸಿ ನಡೆಸುವುದು ಮತ್ತು ಆಂಟಿಫಂಗಲ್ ಚಿಕಿತ್ಸೆಗಳನ್ನು ನಡೆಸುವುದು ಅತಿ ಅಗತ್ಯವಾಗಿದೆ ಎಂದು ಮುಂಜಲ್ ತಿಳಿಸಿದ್ದಾರೆ.