ಗುವಿವಿ ಎನ್ಎಸ್ಎಸ್ ಕೋಶದಿಂದ ಕೊರೊನಾ ಜಾಗೃತಿ
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ (ಎನ್ ಎಸ್ ಎಸ್) ಹಳ್ಳಿ ಹಳ್ಳಿಗೆ ಕೊರೊನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಆಳಂದ ತಾಲೂಕಿನ ನಿಂಬರ್ಗಾ, ವೈಜಾಪುರ, ಬೊಮ್ಮನಹಳ್ಳಿ, ಹಿತ್ತಲ ಶಿರೂರ, ಮಾಡಿಯಾಳ ಗ್ರಾಮಗಳಿಗೆ ತೆರಳಿ ಜನರಿಗೆ ಕೊರೊನಾ ಮಹಾಮಾರಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಟ್ಟಡ ಕಾರ್ಮಿಕರಿಗೆ ಮಾಸ್ಕ್ ವಿತರಣೆ ಮಾಡಲಾಯಿತು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಎನ್ ಎಸ್ ಎಸ್ ಸಂಯೋಜಕರಾದ ಪ್ರೊ. ರಮೇಶ ಲಂಡನಕರ್, ಕೊರೊನಾ ಮಹಾಮಾರಿಯು ಲಕ್ಷಾಂತರ ಜನರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಾ ಇದೆ. ಗ್ರಾಮದ ಜನಗಳು ಎಚ್ಚೆತ್ತುಕೊಳ್ಳಬೇಕು. ಸರಕಾರದ ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ 6ರಿಂದ 10ರವರೆಗೆ ಮನೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಹೊರಬರಬೇಕಾದರೆ ಪ್ರತಿಯೊಬ್ಬರೂ ಮುಖಗವಸವನ್ನು ಧರಿಸಿಕೊಂಡೇ ಹೋಗಬೇಕು. ಪ್ರತಿಯೊಬ್ಬರೂ ಒಬ್ಬರಿಂದ ಇನ್ನೊಬ್ಬರಿಗೆ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಹೊರಗಿನಿಂದ ಬಂದ ಕೂಡಲೇ ಸೋಪಿನಿಂದ ಸ್ವಚ್ಛವಾಗಿ ಕೈತೊಳೆಯಬೇಕು. ಒಂದು ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಬೇರೆ ಕಡೆ ಹೋಗಬೇಕಾದರೆ ವೈದ್ಯರು ಮತ್ತು ಸಹಾಯ ಪಡೆಯಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮೈಗೂಡಿಸಬೇಕು ಎಂದರು.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳು, ನಿಂಬರ್ಗಾ ಪೊಲೀಸ್ ಠಾಣೆ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.