ಬ್ರಿಟನ್ನಿಂದ 3 ಆಕ್ಸಿಜನ್ ಜನರೇಟರ್ ಹೊತ್ತು ಭಾರತಕ್ಕೆ ಹೊರಟ ಜಗತ್ತಿನ ಅತಿ ದೊಡ್ಡ ಕಾರ್ಗೊ ವಿಮಾನ
ಹೈಲೈಟ್ಸ್:
- ಕೋವಿಡ್ ಹೋರಾಟಕ್ಕಾಗಿ ಭಾರತಕ್ಕೆ ನೆರವು ಘೋಷಿಸಿದ್ದ ಬ್ರಿಟನ್
- ಪ್ರತಿ ಜನರೇಟರ್ನಿಂದ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ
- ಭಾರತಕ್ಕೆ 1000 ವೆಂಟಿಲೇಟರ್ಗಳ ರವಾನೆ
ಲಂಡನ್: ಭಾರತಕ್ಕೆ ಕೋವಿಡ್-19 ಬಿಕ್ಕಟ್ಟಿನ ವಿರುದ್ಧದ ಹೋರಾಟಕ್ಕೆ ನೆರವು ನೀಡುವ ಬ್ರಿಟನ್ನ ಯೋಜನೆಯ ಭಾಗವಾಗಿ, 18 ಟನ್ಗಳ ಮೂರು
ಕ್ಸಿಜನ್ ಜನರೇಟರ್ ಮತ್ತು 1000 ವೆಂಟಿಲೇಟರ್ಗಳನ್ನು ಹೊತ್ತ ಜಗತ್ತಿನ ಅತಿ ದೊಡ್ಡ ಸರಕು ಸಾಗಾಣಿಕೆ ವಿಮಾನವು ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ನಿಂದ ಶುಕ್ರವಾರ ಹೊರಟಿದೆ.
ಬೃಹತ್ ಆಂಟೊನೊವ್ 124 ವಿಮಾನದಲ್ಲಿ ಜೀವ ರಕ್ಷಕ ಕಿಟ್ಗಳನ್ನು ತುಂಬಿಸಲು ವಿಮಾನ ನಿಲ್ದಾಣ ಸಿಬ್ಬಂದಿ ರಾತ್ರಿಯಿಡೀ ಶ್ರಮಿಸಿದ್ದಾರೆ. ಈ ವಿಮಾನವು ಭಾನುವಾರ ಬೆಳಿಗ್ಗೆ 8 ಗಂಟೆಗೆ ದೆಹಲಿಯಲ್ಲಿ ಇಳಿಯುವ ನಿರೀಕ್ಷೆಯಿದೆ. ಬಳಿಕ ಈ ಸಾಮಗ್ರಿಗಳನ್ನು ಆಸ್ಪತ್ರೆಗಳಿಗೆ ರವಾನಿಸಲು ಭಾರತೀಯ ರೆಡ್ ಕ್ರಾಸ್ ಸಹಾಯ ಮಾಡಲಿದೆ ಎಂದು ಸಾಮಗ್ರಿಗಳ ಪೂರೈಕೆಗೆ ಅನುದಾನ ಒದಗಿಸಿರುವ ವಿದೇಶ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್ಸಿಡಿಒ) ತಿಳಿಸಿದೆ.
ಈ ಎಲ್ಲ ಮೂರು ಆಕ್ಸಿಜನ್ ಜನರೇಟರ್ ಘಟಕಗಳು 40 ಅಡಿ ಗಾತ್ರದ ಕಂಟೇನರ್ಗಳಾಗಿದ್ದು, ಪ್ರತಿ ನಿಮಿಷಕ್ಕೂ 500 ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಒಂದು ಸಮಯಕ್ಕೆ 50 ಜನರಿಗೆ ಸಾಲುವಷ್ಟು ಆಕ್ಸಿಜನ್ ಉತ್ಪಾದನೆಯಾಗಲಿವೆ.
‘ಉತ್ತರ ಐರ್ಲೆಂಡ್ನಲ್ಲಿನ ಹೆಚ್ಚುವರಿ ಆಕ್ಸಿಜನ್ ಜನರೇಟರ್ಗಳನ್ನು ಭಾರತಕ್ಕೆ ಬ್ರಿಟನ್ ರವಾನಿಸುತ್ತಿದೆ. ಈ ಜೀವರಕ್ಷಕ ಸಾಧನಗಳು ಭಾರತದ ಆಸ್ಪತ್ರೆಗಳಲ್ಲಿ ಕೋವಿಡ್ನಿಂದ ತೀವ್ರ ಅಪಾಯಕ್ಕೆ ಸಿಲುಕಿರುವ ರೋಗಿಗಳಿಗೆ ನೆರವಾಗಲಿವೆ’ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೊಮೆನಿಕ್ ರಾಬ್ ತಿಳಿಸಿದ್ದಾರೆ.
ಈ ಸಾಂಕ್ರಾಮಿಕವನ್ನು ನಿವಾರಿಸಲು ಬ್ರಿಟನ್ ಮತ್ತು ಭಾರತ ಜತೆಯಾಗಿ ಕೆಲಸ ಮಾಡುತ್ತಿವೆ. ನಾವೆಲ್ಲರೂ ಸುರಕ್ಷಿತರಾಗುವವರೆಗೂ ಯಾರೂ ಸುರಕ್ಷಿತರಲ್ಲ ಎಂದು ಅವರು ಹೇಳಿದ್ದಾರೆ.