ಕಲಬುರಗಿ ಜಿಲ್ಲೆಯಲ್ಲಿಲ್ಲ ಕಟ್ಟಿಗೆ ಸಮಸ್ಯೆ!

ಕಲಬುರಗಿ:ಮೇ.9: ದೇಶದೆಲ್ಲೆಡೆ ಎರಡನೇ ಅಲೆ ಕೋವಿಡ್​​ ಆರ್ಭಟ ಮುಂದುವರೆದಿದೆ. ಸಾವು-ನೋವಿನ ಪ್ರಮಾಣ ಹೆಚ್ಚಾಗುತ್ತಿದೆ. ಒತ್ತಡಗಳ ನಡುವೆ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದೇ ದೊಡ್ಡ ಸವಾಲಾಗಿದೆ. ಸೋಂಕಿತರ ಪ್ರಮಾಣ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಹೀಗೆ ಹಲವು ಕೊರತೆಗಳು ಎದ್ದು ಕಾಣುತ್ತಿದೆ. ಇದೆಲ್ಲದರ ಮಧ್ಯೆ ಇದೀಗ ಮೃತದೇಹ ಸುಡಲು ಕಟ್ಟಿಗೆಗಳ ಕೊರತೆಯೂ ಎದುರಾಗಿದೆ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ ಕಟ್ಟಿಗೆ ಸಮಸ್ಯೆ ಎದುರಾಗಿಲ್ಲ.

ಹೌದು, ದೇಶದಲ್ಲಿ ಕೋವಿಡ್​​ ಅಟ್ಟಹಾಸ ಮಿತಿ ಮೀರಿದ್ದು, ಕಲಬುರಗಿ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಮೃತ ಪಡುವರ ಸಂಖ್ಯೆ ಕೂಡಾ ಗಣನೀಯವಾಗಿ ಏರಿಕೆಯಾಗಿದೆ.
ಬೆಂಗಳೂರಿನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಮೃತ ದೇಹ ಸುಡಲು ಕಿಲೋ ಮೀಟರ್ ಉದ್ದದಲ್ಲಿ ದಿನಪೂರ್ತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಇದೆ.
ಮೃತ ದೇಹ ಸುಡುವ ಮಷಿನ್ ಇಲ್ಲದ ಕಡೆಗಳಲ್ಲಿ ಕಟ್ಟಿಗೆಯಿಂದ ಸುಡಲಾಗುತ್ತಿದ್ದು, ಹಲವೆಡೆ ಕಟ್ಟಿಗೆ ಅಭಾವ ಕೂಡಾ ಕಂಡುಬರುತ್ತಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಕಟ್ಟಿಗೆಯ ಅಭಾವವಿಲ್ಲ.ಜಿಲ್ಲೆಯಲ್ಲಿ ಕಟ್ಟಿಗೆಯ ಅಭಾವ ಇಲ್ಲ.
ಸಾಮಾನ್ಯವಾಗಿ ಬೇವು, ಮಾವು ಹಾಗೂ ಜಾಲಿ ಕಟ್ಟಿಗೆಗಳು ಇಲ್ಲಿ ಸಾಕಷ್ಟು ಲಭ್ಯವಿದೆ. ಕಲಬುರಗಿ ನಗರವೊಂದರಲ್ಲಿಯೇ ಸುಮಾರು 120 ಸಾ – ಮಿಲ್​ಗಳಿದ್ದು ನಿತ್ಯ ಸಾವಿರಾರು ಕ್ವಿಂಟಲ್ ಕಟ್ಟಿಗೆಯನ್ನು ಮೃತದೇಹ ದಹಿಸಲು ಜನರು ಖರೀದಿಸುತ್ತಿದ್ದಾರೆ‌.
800 ರೂಪಾಯಿಗೆ ಪ್ರತಿ ಕ್ವಿಂಟಲ್ ಕಟ್ಟಿಗೆ ಮಾರಾಟವಾಗುತ್ತಿದೆ. ಕಟ್ಟಿಗೆ ಕೊರತೆ ಇಲ್ಲದ ಕಾರಣ ಕಟ್ಟಿಗೆಯ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.ಕೋವಿಡ್​ಗೆ ಸಂಬಂಧಿಸಿದಂತೆ ಸದ್ಯ ಜಿಲ್ಲೆಯಲ್ಲಿ ಶೋಚನೀಯ ಪರಿಸ್ಥಿತಿ ಇದೆ.
ಮೃತ ಪಡುವವರ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಈ ಮುಂಚೆ ಮಾರಾಟವಾಗುತ್ತಿದ್ದ ಕಟ್ಟಿಗೆಯ ಹತ್ತು ಪಟ್ಟು ಹೆಚ್ಚಿನ ಕಟ್ಟಿಗೆ ಈಗ ಮಾರಾಟವಾಗುತ್ತಿದೆ. ಆದರೂ ಕಟ್ಟಿಗೆ ಅಭಾವ ಜಿಲ್ಲೆಯಲ್ಲಿಲ್ಲ.
ಈ ರೀತಿ ಮೃತ ಪ್ರಕರಣಗಳು ಏರಿ ಅಂತ್ಯಕ್ರಿಯೆಗೂ ಹಲವು ಸವಾಲುಗಳು ಎದುರಾಗುತ್ತವೆ ಎಂದು ಮನುಷ್ಯ ಎಂದಿಗೂ ಯೋಚಿಸಿರಲಿಲ್ಲ. ಆದ್ರೀಗ ಕೋವಿಡ್​​ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದೆಯಲ್ಲ ಎನ್ನುವ ಚಿಂತೆಯಲ್ಲೇ ಮನುಷ್ಯ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನಿರ್ಲಕ್ಷ್ಯ ವಹಿಸದೇ ಕೋವಿಡ್​ ನಿಯಮಗಳನ್ನು ಪಾಲಿಸಿ ಸೋಂಕು ನಿಯಂತ್ರಣಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *