ಕಲಬುರಗಿ : ಮಹಿಳಾ ನಿಲಯದ ಮುಂದೆ ಶೀತಲ್ ಕೊಲೆ ಪ್ರಕರಣ: ಇಬ್ಬರ ಬಂಧನ
ಕಲಬುರಗಿ,ಮೇ.9:ನಗರದ ಮಹಿಳಾ ನಿಲಯದ ಆವರಣದಲ್ಲಿ ಕಳೆದ 5ರಂದು ಸಮಾಜ ಸೇವಕ ಹಾಗೂ ಹಿಂದೂ ಕಾರ್ಯಕರ್ತ ಶೀತಲಕುಮಾರ್ ತಂದೆ ಬಾಬುರಾವ್ ಪಾಟೀಲ್ (38) ಎಂಬಾತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಖಾದ್ರಿ ಚೌಕ್ನ ಸಿಲ್ವರ್ ಅಪಾರ್ಟ್ಮೆಂಟ್ ಹಿಂದುಗಡೆ ಪ್ರದೇಶದ ನಿವಾಸಿ ಹಾಗೂ ಆಟೋ ಚಾಲಕ ಶೇಖ್ ಮಹಿಬೂಬ್ ತಂದೆ ಶೇಖ್ ಅಬ್ದುಲ್ ಘನಿ (35) ಹಾಗೂ ತರಕಾರಿ ವ್ಯಾಪಾರಿ ಶೇಖ್ ಅಮಜದ್ ತಂದೆ ಶೇಖ್ ಅಬ್ದುಲ್ ಘನಿ (32) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಮೃತನ ಪತ್ನಿ ಶ್ರೀಮತಿ ರೇಖಾ ಗಂಡ ಶೀತಲಕುಮಾರ್ ಪಾಟೀಲ್ ಅವರು ರಾಘವೇಂದ್ರ ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಫ್ರೀನ್ ಹಾಗೂ ಆಕೆಯ ಮಕ್ಕಳ ಪರವಾಗಿ ಕಾರ್ಯನಿರ್ವಹಿಸಿದ್ದರಿಂದ ಕೊಲೆ ಮಾಡಿದ ಕುರಿತು ತಿಳಿಸಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದರು. ಪ್ರಭಾರಿ ಪಿಐ ಪಂಡಿತ್ ಸಗರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿಕ್ರೇಶ್ವರ್, ರಮೇಶ್ ಚವ್ಹಾಣ್, ಕಿಶೋರ್ ಜಾಧವ್, ಮುಜಾಹಿದ್ ಕೋತ್ವಾಲ್ ಅವರು ಕಾರ್ಯಾಚರಣೆ ಮಾಡಿದರು.