Corona Lockdown: ಲಾಕ್ಡೌನ್ ಮಾಡೋದ್ ಮಾಡ್ತೀರಾ…ಈ ಎಲ್ಲಾ ವಿಚಾರವನ್ನೂ ಗಮನಿಸಿ, ಜಾರಿಗೆ ತನ್ನಿ: ಸಿಎಂ ಬಿಎಸ್ವೈಗೆ ಸಿದ್ಧು ಪತ್ರ !
ಬೆಂಗಳೂರು (ಮೇ 09): ಜನತಾ ಕರ್ಫ್ಯೂ ಮುಗಿದು ರಾಜ್ಯ ಸರ್ಕಾರ ಇದೀಗ ಲಾಕ್ಡೌನ್ಗೆ ಸಜ್ಜಾಗ್ತಿದೆ. ನಾಳೆಯಿಂದ ಕಂಪ್ಲೀಟ್ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸಿಎಂ ಯಡ್ಯೂರಪ್ಪನಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರವಾದ ಪತ್ರ ಬರೆದಿದ್ದಾರೆ. ಲಾಕ್ಡೌನ್ ಮತ್ತು ಕೊರೊನಾ ಪರಿಸ್ಥಿತಿಯ ಬಗ್ಗೆ ಸಿಎಲ್ಪಿ ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.
ಇದು ದುಡಿಯುವ ವರ್ಗಕ್ಕೆ ನೇರವಾಗುವಂತೆ ರಚಿಸಿರುವ ಪತ್ರ ಎನ್ನಲಾಗಿದೆ. ಮೊದಲಿಗೆ ಜಿಲ್ಲಾವಾರು ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಒತ್ತು ಕೊಡಬೇಕು. ಆಕ್ಸಿಜನ್ ಲಭ್ಯತೆ ಆಧಾರದ ಮೇಲೆ ಕೋವಿಡ್ ಆಸ್ಪತ್ರೆ ಸ್ಥಾಪನೆ ಮಾಡಬೇಕು. ತಾತ್ಕಾಲಿಕ ಕೊರೋನಾ ಆಸ್ಪತ್ರೆ ಸ್ಥಾಪನೆಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.
ಇನ್ನು, ಲಸಿಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಕೂಡಲೇ ಬ್ರೇಕ್ ಹಾಕಬೇಕಿದೆ. ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್ ಸಮಸ್ಯೆ ನಿವಾರಣೆಗೆ ಒತ್ತಾಯಿಸಿದ್ದಾರೆ. ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೆಲುಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ಮಾಡಿ ಚಿಕಿತ್ಸೆ ನೀಡಬೇಕು ಎಂದು ಪತ್ರದಲ್ಲಿ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.
ಇನ್ನು ಇಂಥಾ ಸಂದರ್ಭದಲ್ಲಿ ಬಹುತೇಕರಿಗೆ ಬದುಕು ನಡೆಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ನೀಡಬೇಕು. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ರೂ.10,000 ಸಹಾಯಧನ ನೀಡಬೇಕು. ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ ರೂ.10,000/- ಗಳನ್ನು ನೀಡಬೇಕು.
ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜನ್ನು ನೀಡಲು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. ವಿಪಕ್ಷ ನಾಯಕರ ಈ ಸಲಹೆಗಳನ್ನು ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ಗಣನೆಗೆ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.