ತನ್ನ ಆಸ್ಪತ್ರೆಗೆ ಔಷಧಿ ನೀಡದ್ದಕ್ಕೆ ಸಿಎಂ, ಆರೋಗ್ಯ ಸಚಿವರ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ..!
ಬೆಂಗಳೂರು: ಕೊರೋನಾ 2ನೇ ಅಲೆ ರಾಜ್ಯದ ಜನರನ್ನು ಹೈರಾಣಾಗಿಸುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಕಾಲಕ್ಕೆ ಸಿಗದೇ 24 ಮಂದಿ ಪ್ರಾಣ ಬಿಟ್ಟಿರುವುದು ಕಣ್ಣೆದುರು ಇನ್ನೂ ಹಸಿರಾಗೇ ಇದೆ. ಆಸ್ಪತ್ರೆಗಳಲ್ಲಿ ಬೆಡ್ಗಾಗಿ, ಆಕ್ಸಿಜನ್ಗಾಗಿ, ಔಷಧಿಗಾಗಿ ಜನ ಪರದಾಡುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು, ಸೆಲೆಬ್ರೆಟಿಗಳು ಹೊರತಾಗಿಲ್ಲ. ಮಾಜಿ ಸಚಿವ, ವಿಜಯಪುರದ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಸಹ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮ ಬಿಎಲ್ಡಿಎ ಆಸ್ಪತ್ರೆಗೆ ರೆಮ್ಡಿಸಿವಿರ್ ಔಷಧಿ ಲಭ್ಯವಾಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಎಂ.ಬಿ.ಪಾಟೀಲ್, ವಿಜಯಪುರ ಜಿಲ್ಲೆಯ ಬಡ ಜನರಿಗಾಗಿ ನನ್ನ ಆಸ್ಪತ್ರೆಯಲ್ಲಿ 500 ಬೆಡ್ಗಳನ್ನು ಮೀಸಲಿಟ್ಟಿದ್ದೇನೆ. 300 ಆಕ್ಸಿಜನ್ ಬೆಡ್ಗಳಿರುವ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಾಚೆಗೂ ನನ್ನ ಆಸ್ಪತ್ರೆಗೆ ಅಗತ್ಯ ಪ್ರಮಾಣದಲ್ಲಿ ಔಷಧಿ ಲಭ್ಯವಾಗುತ್ತಿಲ್ಲ. ಹಲವು ಬಾರಿ ಔಷಧಿಗಾಗಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಮುಚ್ಚಿಸಲು ಹುನ್ನಾರ ನಡೆಸಿದ್ದೀರಾ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಕೆ.ಸುಧಾಕರ್ ಅವರನ್ನು ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಔಷಧಿ ನೀಡದೆ ಆಸ್ಪತ್ರೆಯನ್ನು ಮುಚ್ಚಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ತಿಂಗಳು 21ರಿಂದ ಎಂ.ಬಿ.ಪಾಟೀಲ್ ಮಾಲೀಕತ್ವದ ಬಿಎಲ್ಡಿಎ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಶೇ.70ರಷ್ಟು ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿದ್ದಾರೆ. ಕೇವಲ 3 ಸಾವಿರ ರೂ.ಗೆ ಬೆಡ್ ನೀಡಿ ಬಡ ಸೋಂಕಿತರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಬೆಡ್ ನೀಡಲಾಗುತ್ತಿದೆ. ಸರ್ಕಾರವೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ವೊಂದಕ್ಕೆ 10 ಸಾವಿರ ರೂ.ನಿಗದಿ ಪಡಿಸಿದೆ. ಆದರೆ ಮಾಜಿ ಸಚಿವರು ಬಡ ಜನರಿಗಾಗಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.