ಕೋವಿಡ್​​ಗೆ ಬಲಿಯಾದ ‘ಜನತಾ ಪರಿವಾರ ನಾಯಕ’, ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ

‘ಜನತಾ ಪರಿವಾರ ನಾಯಕ’ ಖ್ಯಾತಿಯ ರಾಜ್ಯಸಭಾ ಮಾಜಿ ಸದಸ್ಯ, ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ. ಶಾಣಪ್ಪ ಅವರು ಇಂದು ಕೋವಿಡ್​​ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಕಲಬುರಗಿ: ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ(79) ಅವರು ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

‘ಜನತಾ ಪರಿವಾರ ನಾಯಕ’ ಎಂದೇ ಖ್ಯಾತಿ ಪಡೆದಿದ್ದ ಶಾಣಪ್ಪ ಅವರು ಜೆ. ಎಚ್. ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದರು. ನಂತರ ಬಿಜೆಪಿ ಸೇರಿದ್ದ ಅವರನ್ನು ಮೊದಲು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ಬಳಿಕ ರಾಜ್ಯ ವಿಧಾನ ಪರಿಷತ್​ಗೂ ನಾಮನಿರ್ದೇಶನ ಗೊಳಿಸಲಾಗಿತ್ತು. ಮೂಲತಃ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದರಾದ ಶಾಣಪ್ಪ ಕಲಬುರಗಿ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಣಪ್ಪ ಅವರು ಕಾಂಗ್ರೆಸ್ ಸೇರಿ‌ ರಾಜ್ಯಸಭೆ ಪ್ರತಿಪಕ್ಷ ನಾಯಕ ‌ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದರು. ನಾಲ್ಕೈದು ದಿನಗಳ ಹಿಂದಷ್ಟೇ ಕೋವಿಡ್ ದೃಢಪಟ್ಟಿದ್ದರಿಂದ ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ಕಾರ್ಮಿಕ ಮುಖಂಡರಾಗಿ ಕೆ. ಬಿ. ಶಾಣಪ್ಪ

ಕೆ.ಬಿ. ಶಾಣಪ್ಪನವರು, ವಾಡಿಯ ಎಸಿಸಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿ, ಕಾರ್ಮಿಕರ‌ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದರು. ಕಮ್ಯುನಿಸ್ಟ್ ಎಡಪಂಥೀಯ ವಿಚಾರಧಾರೆಗಳನ್ನು ಹೊಂದಿದ್ದ ಕೆ ಬಿ ಅವರು ಸದಾ ಕಾರ್ಮಿಕರ ಕಷ್ಟಕ್ಕೆ ಮಿಡಿಯುತ್ತಿದ್ದರು. ಅಲ್ಲದೆ, ಅಂದಿನ ಶಹಾಬಾದ್ ವಿಧಾನಸಭಾ ಕ್ಷೇತ್ರದಿಂದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ-ಸಿಪಿಎಂ)ದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಸಿಎಂ ಸಂತಾಪ

ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ನಾಯಕರಾಗಿ, ಶಹಾಬಾದ್ ಶಾಸಕರಾಗಿ, ಜೆ. ಹೆಚ್. ಪಟೇಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಗೆ ಸೇರ್ಪಡೆಯಾದ ನಂತರ ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಶಾಣಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದವರ ಪರ ದನಿಯಾಗಿದ್ದರು. ಅವರ ನಿಧನದಿಂದ ಒಬ್ಬ ನೇರ, ನಿಷ್ಠುರ ನಡವಳಿಕೆಯ ನಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *