Corona Lockdown: ಇಂದಿನಿಂದ ರಾಜ್ಯ ಕಂಪ್ಲೀಟ್ ಲಾಕ್, ಬೇಕಾಬಿಟ್ಟಿ ಓಡಾಡಿದ್ರೆ ಅಟ್ಟಾಡಿಸಿಕೊಂಡು ಹೊಡೀತಾರೆ ಜೋಕೆ !
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಲಾಕ್ ಡೌನ್ ಶುರುವಾಗಿದೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಕೆ.ಆರ್ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಈಗಾಗಲೇ ಇಲ್ಲಿನ ತರಕಾರಿ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಸಿಟಿಗೆ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ರಸ್ತೆ ಬದಿ ವ್ಯಾಪಾರಸ್ಥರ ಸಂಖ್ಯೆಯೂ ತೀರಾ ಕಡಿಮೆ ಇದೆ.
ಬೆಂಗಳೂರು(ಮೇ 10): ಮಿತಿಮೀರುತ್ತಿರುವ ಕೊರೊನಾ ಸೋಂಕಿನ ಆರ್ಭಟಕ್ಕೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಇಂದಿನಿಂದ 14 ದಿನಗಳ ಕಟ್ಟುನಿಟ್ಟಿನ ಲಾಕ್ಡೌನ್ ಘೋಷಣೆ ಮಾಡಿದೆ. ಈಗಾಗಲೇ ಒಮ್ಮೆ ಜನತಾ ಕರ್ಫ್ಯೂ ಜಾರಿ ಮಾಡಿದ್ದರೂ ಅದರಿಂದ ಸೋಂಕಿನ ಹರಡುವಿಕೆ ಕಡಿಮೆ ಆಗಿರಲಿಲ್ಲ. ಹಾಗಾಗಿ ಈ ಬಾರಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಒಮ್ಮೆ ಲಾಕ್ಡೌನ್ ಘೋಷಣೆಯಾದ ನಂತರ ಅನೇಕ ಬಾರಿ ನಿಯಮಗಳ ಪರಿಷ್ಕರಣೆ ಮಾಡಲಾಗುತ್ತಿದೆ. ಅದೇನೇ ಇದ್ರೂ ಈ ಸಲದ ಲಾಕ್ಡೌನ್ ಬಹಳ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಲು ಸರ್ಕಾರದ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಸಜ್ಜಾಗಿವೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಲಾಕ್ ಡೌನ್ ಶುರುವಾಗಿದೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಕೆ.ಆರ್ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಈಗಾಗಲೇ ಇಲ್ಲಿನ ತರಕಾರಿ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಸಿಟಿಗೆ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ರಸ್ತೆ ಬದಿ ವ್ಯಾಪಾರಸ್ಥರ ಸಂಖ್ಯೆಯೂ ತೀರಾ ಕಡಿಮೆ ಇದೆ.
ಲಾಕ್ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಪೋಲೀಸರು ಶ್ರಮಿಸುತ್ತಿದ್ದು ಬೆಳಗ್ಗೆಯೇ ಬ್ಯಾರಿಕೇಡ್ಗಳನ್ನು ಸಿದ್ದ ಮಾಡಿ ಪ್ರಮುಖ ರಸ್ತೆಗಳನ್ನು ಮುಚ್ಚುತ್ತಿದ್ದಾರೆ. ಮುಂಜಾನೆ 8 ಗಂಟೆಯಿಂದಲೇ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಸೀಜ್ ಮಾಡಲು ಆರಂಭಿಸಲಿದ್ದಾರೆ. ಇದೆಲ್ಲದರ ಮಧ್ಯೆ ಮುಂಜಾನೆಯೇ ಕೆಲ ವಾಹನಗಳು ರಸ್ತೆಗಿಳಿದಿವೆ.
ಬೆಂಗಳೂರಿನ ನಾನಾ ಕಡೆ ಟ್ರಾಫಿಕ್ ಹಾಗೂ ಲಾ ಅಂಡ್ ಆರ್ಡರ್ ಪೊಲೀಸರಿಂದ ವಾಹನಗಳ ಸೀಜ್ ಕಾರ್ಯ ನಡೆಯಲಿದೆ. ಮುಂಜಾನೆಯಿಂದಲೇ ಹೊಯ್ಸಳ ವಾಹನಗಳು ಗಲ್ಲಿಗಲ್ಲಿಗಳಲ್ಲಿ ಮೈಕ್ ಮೂಲಕ ಈ ಬಗ್ಗೆ ಅನೌನ್ಸ್ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಎಸ್ಜೆಪಿ ರಸ್ತೆಯಲ್ಲಿ ಹೂವಿನ ವ್ಯಾಪಾರ ಜೋರಾಗಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು ಬಹುತೇಕ ಜನ ನಡೆದುಕೊಂಡು ಬಂದು ಹೂವು ಖರೀದಿಸುತ್ತಿದ್ದಾರೆ. ಈ ನಡುವೆ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದವರಿಗೆ ಮಾರ್ಷಲ್ಗಳು ಮುಲಾಜಿಲ್ಲದೆ ದಂಡ ಹಾಕುತ್ತಿದ್ದಾರೆ. 8 ಗಂಟೆ ವೇಳೆಗೆ ಹೂವಿನ ಮಾರುಕಟ್ಟೆಯೂ ಮುಚ್ಚುವಂತೆ ಪೋಲೀಸರು ಈಗಾಗಲೇ ವ್ಯಾಪಾರಿಗಳಿಗೆ ತಿಳಿಸಿದ್ದಾರೆ.
ಇದೆಲ್ಲದರ ನಡುವೆ ಬೆಳ್ಳಂಬೆಳಗ್ಗೆ ಮಾರ್ಕೆಟ್ನಲ್ಲಿ ಲಾಠಿ ಚಾರ್ಜ್ ಆರಂಭವಾಗಿದೆ. ಸುಖಾಸುಮ್ಮನೆ ಓಡಾಡುತ್ತಿರುವವರಗೆ ಪೋಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ. ಎಲ್ಲಿಗೆ ಮತ್ತು ಏಕೆ ಹೋಗುತ್ತಿದ್ದೀರಿ ಎಂದಿದ್ದಕ್ಕೆ ಸರಿಯಾಗಿ ಉತ್ತರ ಕೊಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಲಾಠಿ ಏಟು ಬಿದ್ದಿದೆ. ತನ್ನ ಗಂಡನಿಗೆ ಏಕೆ ಹೊಡೆದಿರಿ ಎಂದು ಹೆಂಡರಿ ಪೋಲೀಸರನ್ನೇ ಪ್ರಶ್ನಿದ ಘಟನೆಯೂ ನಡೆದಿದೆ.
ಇದರೊಂದಿಗೆ ಆಟೋಗಳ ಓಡಾಟ ಕೂಡಾ ಹೆಚ್ಚಾಗಿದ್ದು ಪೋಲೀಸರು ಆಟೋಗಳನ್ನು ಸೀಜ್ ಮಾಡಲು ಮುಂದಾಗಿದ್ದಾರೆ. ಮುಂಜಾನೆಯೇ ಸುಮಾರು 10ಕ್ಕೂ ಹೆಚ್ಚು ಆಟೋಗಳು ಸೀಜ್ ಆಗಿವೆ. ಪ್ರಯಾಣಿಕರು ಇದ್ದರೂ ಆಟೋಗಳನ್ನು ಸೀಜ್ ಮಾಡಲಾಗುತ್ತಿದೆ. ಕೆ.ಆರ್ ಮಾರುಕಟ್ಟೆ ಪೊಲೀಸರಿಂದ ಆಟೋಗಳು ಸೀಜ್ ಕೆಲಸ ನಡೆಯುತ್ತಿದೆ. ಆಟೋಗಳ ಓಡಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಸೀಜ್ ಮಾಡಲಾಗುತ್ತಿದೆ.