ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಕಮೀಷನರ್ ಸೂಚನೆ
ಬೆಂಗಳೂರು, -ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ಲಾಕ್ ಡೌನ್ ವೇಳೆ ಪೊಲೀಸರ ಲಾಠಿ ಪ್ರಹಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬಲಪ್ರಯೋಗ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಲಾಕ್‌ಡೌನ್ ನಿಯಮಗಳ ಜಾರಿ ವೇಳೆ ಲಾಠಿ ಬೀಸುತ್ತಿರುವ ಪೊಲೀಸರಿಗೆ ಸೂಚನೆ ನೀಡಿದ್ದು, ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ.
ಅದನ್ನು ಬಿಟ್ಟು ಯಾರ ಮೇಲೂ ಬಲಪ್ರಯೋಗ ಮಾಡದಂತೆ ಅವರು ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ವೇಳೆ ಸಾರ್ವಜನಿಕರು ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಸಿಬ್ಬಂದಿ ಕ್ರಮ ಕೈಗೊಳ್ಳಬೇಕೆ ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ.
ಅಲ್ಲದೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಜಾರಿಯಾಗಿರುವ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಥವಾ ಕೆಲಸದ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಾದಲ್ಲಿ ಡಿಸಿಪಿ ಇಂಟಲಿಜೆನ್ಸ್ ಶ್ರೀ.ಸಂತೋಷ್ ಬಾಬು ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-22942354 ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.