ಲಾಕ್‌ಡೌನ್‌ ಪೂರ್ತಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ನೀಡಲು ಹೈಕೋರ್ಟ್‌ ಆದೇಶ: ಸರಕಾರ ಹೇಳಿದ್ದೇನು?

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಯಾವೊಬ್ಬ ಕಾರ್ಮಿಕ, ನಿರ್ಗತಿಕ ಆಹಾರವಿಲ್ಲದೆ ಬಳಲುವಂತಾಗಬಾರದು. ಲಾಕ್‌ಡೌನ್‌ ಜಾರಿಯಲ್ಲಿರುವವರೆಗೂ ಆಹಾರ ಭದ್ರತೆ ಕಲ್ಪಿಸಬೇಕು ಎಂದು ಹೈಕೋರ್ಟ್‌ ಮಂಗಳವಾರ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಕೋವಿಡ್‌ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್‌ಗಳ ವಿಚಾರಣೆ ನಡೆಸಿದ ಸಿಜೆ ಎ.ಎಸ್‌. ಓಕ್‌ ಮತ್ತು ಹಿರಿಯ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಸರಕಾರದ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌. ಸುಬ್ರಮಣ್ಯ, ”ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಬುಧವಾರದಿಂದಲೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಉಚಿತ ಊಟ ನೀಡಲಾಗುವುದು. ಇದಕ್ಕೆ ಇಸ್ಕಾನ್‌, ಅದಮ್ಯ ಚೇತನ, ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸೇರಿ 17 ಸರಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುವುದು. ಕಟ್ಟಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲು ಬಿಲ್ಡರ್‌ಗಳಿಗೆ ಸೂಚಿಸಲಾಗಿದೆ,” ಎಂದರು.

10 ಕೆ.ಜಿ ಪಡಿತರ ಧಾನ್ಯ!
”ಅಲ್ಲದೆ, ಪಡಿತರ ಚೀಟಿ ಹೊಂದಿರುವವರಿಗೆ ಮೇ ಮತ್ತು ಜೂನ್‌ ತಿಂಗಳಲ್ಲಿ 10 ಕೆ.ಜಿ. ಪಡಿತರ ಧಾನ್ಯ ನೀಡಲಾಗುವುದು. ಕಾರ್ಡ್‌ ಹೊಂದಿಲ್ಲದೆ ಅರ್ಜಿ ಸಲ್ಲಿಸಿರುವವರಿಗೂ ಪಡಿತರ ನೀಡಲಾಗುವುದು,” ಎಂದು ಹೇಳಿದರು. ”ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಸ್ವಸಹಾಯ ಸಂಘಗಳು ಹಾಗೂ ಮಧ್ಯಾಹ್ನದ ಬಿಸಿಯೂಟ ತಯಾರಕರ ನೆರವಿನಿಂದ ಪ್ರತಿ ದಿನ 150 ಊಟ ಸಿದ್ಧಪಡಿಸಿ ಅಗತ್ಯವಿರುವವರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಅದಕ್ಕೆ ಎಲ್ಲ ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ,” ಎಂದು ಹೇಳಿದರು. ಆಗ ನ್ಯಾಯಪೀಠ, ”ಆ ಕುರಿತಂತೆ ಗುರುವಾರ ನಿರ್ದಿಷ್ಟ ಯೋಜನೆಯನ್ನು ಹಂಚಿಕೊಳ್ಳಿ. ಲಾಕ್‌ಡೌನ್‌ ಜಾರಿಯಲ್ಲಿರುವಷ್ಟು ದಿನವೂ ಆಹಾರ ವಿತರಣೆ ಮುಂದುವರಿಸಬೇಕು. ದಾಸೋಹ ಹೆಲ್ಪ್‌ಲೈನ್‌ ಮರು ಆರಂಭಿಸಬೇಕು. ಅಗತ್ಯವಿರುವ ಎಲ್ಲರಿಗೂ ಆಹಾರ ದೊರೆಯಬೇಕು. ಯಾರೊಬ್ಬರಿಗೂ ಆಹಾರ ಇಲ್ಲದಂತಾಗಬಾರದು. ವ್ಯವಸ್ಥಿತವಾಗಿ ಹಾಗೂ ಕ್ರಮಬದ್ಧವಾಗಿ ಆಹಾರ ಪೂರೈಕೆಯಾಗಬೇಕು,” ಎಂದು ನಿರ್ದೇಶನ ನೀಡಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *