ಬೆಂಗಳೂರಲ್ಲಿ ಬಹುಶಃ ಎರಡ್ಮೂರು ವಾರಗಳಲ್ಲಿ ಸೋಂಕು ಹತೋಟಿಗೆ ಬರಲಿದೆ; ಆರೋಗ್ಯ ಸಚಿವ ಸುಧಾಕರ್
ಬೆಂಗಳೂರು(ಮೇ 12): ಯಾವುದೇ ಸೊಂಕು ಕಂಡುಬಂದರೂ ಮೊದಲು ನಗರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯ. ಪ್ರಾರಂಭದಲ್ಲಿ ಇದು ಕ್ಯಾಪಿಟಲ್ ಸಿಟಿಯಲ್ಲಿ ಕಂಡು ಬರುತ್ತದೆ. ಕಾರಣ ಹೆಚ್ಚು ಮೂಮೆಂಟ್ ಇರುವ ನಗರ. ಆದ್ದರಿಂದ ಸೋಂಕು ಹೆಚ್ಚಾಗುತ್ತದೆ. ಮುಂಬೈ ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಇವಾಗ ಅಲ್ಲಿ ಕಡಿಮೆ ಆಗಿದೆ ಅಂತಾರೆ. ಆದರೆ ಜಿಲ್ಲೆಗಳಲ್ಲಿ 20 ರಿಂದ 25 ಪರ್ಸೆಂಟ್ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಬಹುಶಃ ಎರಡ್ಮೂರು ವಾರಗಳಲ್ಲಿ ಸೊಂಕು ಹತೋಟಿಗೆ ಬರಲಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಆಗಲಿದೆ. ಹೀಗಾಗಿ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಸಮಾಲೋಚನೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗದಂತೆ ಸಿದ್ದತೆ ಮಾಡಿಕೊಳ್ಳಿ ಎಂದಿದ್ದೇನೆ. ದೊಡ್ಡ ನಗರಗಳಲ್ಲಿ ಇಷ್ಟು ಆರೋಗ್ಯ ವ್ಯವಸ್ಥೆ ಇದ್ದರೂ ಐಸಿಯು, ವೆಂಟಿಲೇಟರ್ ಕೊರತೆ ಉಂಟಾಯ್ತು. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಸರಿಯಾದ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಿನಿಂದಲೇ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಡೌನ್ ಹಾಸ್ಪಿಟಲ್ ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದ್ದಿದ್ದೇನೆ ಎಂದರು.
ಮುಂದುವರೆದ ಅವರು, ಇಂದು ನಾನು ಹಲವು ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಕೆ ಆರ್ ಪುರ , ಹೊಸಕೋಟೆ , ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತೇನೆ. ನೇರವಾಗಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೆ, ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಅಂತ ತಿಳಿಯುತ್ತೆ. ನಾವು ಹೋಗಿ ಭೇಟಿ ಕೊಡದೆ ಹೋದ್ರೆ, ಏನ್ ಸಮಸ್ಯೆಗಳು ಇವೆ ಅಂತ ತಿಳಿಯಲ್ಲ. ಹಾಗಾಗಿ ಖುದ್ದಾಗಿ ನಾನೇ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದಿರುವೆ. ಅದೇ ರೀತಿ ಇಂದು ಕೆಲವು ಕಡೆ ಭೇಟಿ ಕೊಡುತ್ತಿದ್ದೇನೆ ಎಂದು ಹೇಳಿದರು.