ಆಕ್ಸಿಜನ್‌ ಕೊಡಿಸಿದ್ದು ಹೈಕೋರ್ಟ್‌: ಪಿಎಂ ಮೋದಿಗೆ ಧನ್ಯವಾದ ತಿಳಿಸಿದ ಪ್ರತಾಪ್‌ ಸಿಂಹಗೆ ಕಾಂಗ್ರೆಸ್‌ನಿಂದ ಟಾಂಗ್‌!

ಹೈಲೈಟ್ಸ್‌:

  • ಆಕ್ಸಿಜನ್‌ ಕುರಿತು ಮುಂದುವರಿದ ಬಿಜೆಪಿ-ಕಾಂಗ್ರೆಸ್‌ ತಿಕ್ಕಾಟ
  • ಮೋದಿಗೆ ಧನ್ಯವಾದ ತಿಳಿಸಿದ ಪ್ರತಾಪ್‌ ಸಿಂಹಗೆ ಕಾಂಗ್ರೆಸ್‌ ಟಾಂಗ್‌
  • ಮೋದಿ ಕೊಟ್ಟಿದಲ್ಲ ಕರ್ನಾಟಕದ ಹೈಕೋರ್ಟ್‌ ಕೊಟ್ಟಿದ್ದು ಎಂದ ಕೈ

ಮೈಸೂರು: ಮೈಸೂರಿಗೆ ಕೇಂದ್ರದಿಂದ ಬುಧವಾರ 20 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬಂದು ತಲುಪಿದ್ದು, ಜಿಲ್ಲಾಡಳಿತಕ್ಕೆ ಕೊಂಚ ನಿರಾಳವಾಗಿದೆ. ಆದರೆ ಈ ವಿಷಯದ ಕುರಿತು ವಾದ-ವಿವಾದ ನಡೆಯುತ್ತಿದೆ. ”ಮೈಸೂರು ಜಿಲ್ಲೆಗೆ ಹೆಚ್ಚುವರಿ ಆಕ್ಸಿಜನ್‌ ಕಳುಹಿಸುವಂತೆ ನಮ್ಮ ಕೋರಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದೆ. ನರೇಂದ್ರ ಮೋದಿ ಅವರಿಗೆ ಧನ್ಯವಾದ,” ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಆಕ್ಸಿಜನ್‌ ಶ್ರೇಯಸ್ಸು ಸಲ್ಲ ಬೇಕಿರುವುದು ಕೋರ್ಟ್‌ಗೆ ಹೊರತು ಮೋದಿಗಲ್ಲಎಂದು ವ್ಯಂಗ್ಯವಾಡಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದೆ. ಕೇವಲ ಮೈಸೂರು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದ ಕೂಡ ಸೋಂಕಿತರು ಚಿಕಿತ್ಸೆಗಾಗಿ ಮೈಸೂರಿಗೆ ನಿತ್ಯ ಆಗಮಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿಯೂ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಿದ್ದು, ನಿತ್ಯ 44 ಕೆ.ಎಲ್‌ ಆಕ್ಸಿಜನ್‌ ಪೂರೈಕೆಗೆ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.

ಈ ನಡುವೆ ಚಾಮರಾಜನಗರ ಆಕ್ಸಿಜನ್‌ ದುರಂತದ ನಂತರ ಕರ್ನಾಟಕಕ್ಕೆ ನಿತ್ಯ 850 ಮೆಟ್ರಿಕ್‌ ಟನ್‌ ಬದಲು 1200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಕೆ ಮಾಡುವಂತೆ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಇದಕ್ಕೆ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ತಡೆ ಕೋರಿತ್ತು. ಇದನ್ನು ನಿರಾಕರಿಸಿದ ಸುಪ್ರೀಂಕೋರ್ಟ್‌, ಹೈಕೋರ್ಟ್‌ ಆದೇಶ ಪಾಲಿಸುವಂತೆ ಹೇಳಿತ್ತು.

ಕೋರ್ಟ್‌ನಿಂದಾಗಿ ಆಕ್ಸಿಜನ್‌

ಪ್ರತಾಪ್‌ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕನ್ನಡಿಗರು ಧನ್ಯವಾದ ಹೇಳಬೇಕಾಗಿರುವುದು ನ್ಯಾಯಾಲಯಕ್ಕೆ ಎಂದಿದ್ದಾರೆ. ”ಕರ್ನಾಟಕದಲ್ಲಿ ಸುಮಾರು 2445 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಉತ್ಪಾದನೆಯಾದರೂ, ಅದರ ಹಂಚಿಕೆ ಕೇಂದ್ರ ಸರಕಾರದ ಒಡೆತನದಲ್ಲಿದೆ. ಪರಿಣಾಮ ರಾಜ್ಯ ಸರಕಾರಕ್ಕೆ ಮಂಜೂರಾಗಿದ್ದು 850 ಮೆಟ್ರಿಕ್‌ ಟನ್‌ ಮಾತ್ರ. ಕೋರ್ಟ್‌ ಆದೇಶದ ಆಧಾರದಲ್ಲಿ ರಾಜ್ಯಕ್ಕೆ ಆಮ್ಲಜನಕ ಬಂದಿದೆಯೇ ಹೊರತು ಇದು ಮೋದಿಯ ಕೊಡುಗೆ ಅಲ್ಲ,” ಎಂದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *