ರಾಜ್ಯದಲ್ಲಿ ಶುಕ್ರವಾರದಿಂದ 18-44 ವರ್ಷದವರಿಗಿಲ್ಲ ಲಸಿಕೆ; ಸಿಎಂ ಸಭೆಯಲ್ಲಿ ತೀರ್ಮಾನ

ಬೆಂಗಳೂರು (ಮೇ. 12): ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕಳೆದೆರಡು ದಿನಗಳಿಂದ ಲಸಿಕೆ ನೀಡಲು ಆರಂಭಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ  ಲಸಿಕೆಗಳಿಗೆ ಹಾಹಾಕಾರ ಆರಂಭವಾಗಿದೆ.  ಲಸಿಕೆಗಾಗಿ ಜನರು ಬೆಳಕು ಹರಿಯುವ ಮನ್ನವೇ ಲಸಿಕೆ ಕೇಂದ್ರಗಳ ಬಳಿ ನಿಲ್ಲುತ್ತಿದ್ದು, ಲಸಿಕೆ ಪಡೆಯದೇ ನಿರಾಸೆಗೊಳ್ಳುತ್ತಿದ್ದಾರೆ. ಲಸಿಕೆ ಕೊರತೆ ಹಿನ್ನಲೆ ವಿತರಣೆಯಲ್ಲಿ ಸಾಕಷ್ಟು ಗೊಂದಲ ವ್ಯಕ್ತವಾದ ಹಿನ್ನಲೆ  ರಾಜ್ಯ ಸರ್ಕಾರ ಶುಕ್ರವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ಕೆ ತಡೆ ನೀಡಿದೆ. ಲಸಿಕೆ ಕುರಿತು ರಾಜ್ಯದಲ್ಲಿ ಉಂಟಾಗಿರುವ ಗೊಂದಲ ಕುರಿತು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಇಂದು ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ್ದು, ಈ ವೇಳೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಕಾರ್ಯವನ್ನು ತಾತ್ಕಲಿಕವಾಗಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.  ಕೇವಲ 45 ವರ್ಷದ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡುವಂತೆ ಸೂಚನೆ ನೀಡಿದ್ದಾರೆ. 

ಕಾವೇರಿ ನಿವಾಸದಲ್ಲಿ ಸಭೆ ಹಿರಿಯ ಸಚಿವರ ಮತ್ತು ಅಧಿಕಾರಿಗಳ ಸಭೆ ನಡೆಸಿದ ಸಿಎಂ,  ರಾಜ್ಯದಲ್ಲಿ ಲಸಿಕೆ ಕೊರತೆ ಕುರಿತು ಚರ್ಚೆ ನಡೆಸಲಾಯಿತು.  ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದ್ದು,  ಆದಷ್ಟು ಬೇಗ ಅಧಿಕಾರಿಗಳು ಗೊಂದಲ ನಿವಾರಿಸಬೇಕು ಎಂದು ಸೂಚನೆ ನೀಡಿದರು. ರಾಜ್ಯದಲ್ಲಿ ಲಸಿಕೆಗಳಿಗೆ ಹಾಹಾಕಾರ ಆರಂಭವಾಗಿದೆ. ಹೀಗಾಗಿ ತುರ್ತು ಲಸಿಕೆ ತರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ವ್ಯಾಕ್ಸಿನ್ ಪೂರೈಸುವ ಕಂಪನಿಗಳ ‌ಜೊತೆ ನಿರಂತರವಾಗಿ ಸಂಪರ್ಕ‌ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದೇ ವೇಳೆ ಸೆಕೆಂಡ್​ ಡೋಸ್​ ಲಸಿಕೆ ಪಡೆಯುವವರಿಗೆ ಪ್ರಧಾನ ಆದ್ಯತೆ ಮೇರೆಗೆ ನೀಡಿ ಲಸಿಕೆ ಲಭ್ಯವಿದ್ದರೆ, ಮೊದಲ ಡೋಸ್​ ನೀಡುವಂತೆ ತಿಳಿಸಿದ್ದಾರೆ

ರಾಜ್ಯ ಸರ್ಕಾರದ ಹೊಸ ಆ್ಯಪ್​ಗೆ ಸಿದ್ಧತೆ

ಕೋವಿನ್ ಆ್ಯಪ್ ಮೂಲಕ ರೆಜಿಸ್ಟರ್ ಮಾಡಿದವರಿಗೂ ಲಸಿಕೆ ನೀಡದಿರಲು ನಿರ್ಧರಿಸಲಾಗಿದೆ. ಇದೇ ವೇಳೆ ಕೋವಿನ್ ಆ್ಯಪ್ ಬದಲು ಹೊಸ ಆ್ಯಪ್ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿನ್ ಮೂಲಕ ಎಲ್ಲಿ ಬೇಕಾದರೂ ರೆಜಿಸ್ಟರ್ ಮಾಡಬಹುದು. ಇದರಿಂದ ಜನರು ಎಲ್ಲಿ ಬೇಕಾದರೂ ಲಸಿಕೆ ಪಡೆಯುತ್ತಿದ್ದು, ತೊಂದರೆಯುಂಟಾಗುತ್ತಿದೆ.  ಹೀಗಾಗಿ ಆಯಾ ಜಿಲ್ಲೆಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿ, ಜಿಲ್ಲೆಯ ಜನರಿಗೆ ಪ್ರಾಧನ್ಯತೆ ನೀಡುವ ಕುರಿತು  ಸರ್ಕಾರ ಚಿಂತನೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಸಿದ್ದಪಡಿಸಿ, ಈ ಆ್ಯಪ್​ ಮೂಲಕ ದಾಖಲು ಮಾಡಿಕೊಳ್ಳಲು ಸೂಚನೆ ನೀಡಲಿದೆ.

ಮೇ. 1 ರಂದು ಆರಂಭವಾಗಬೇಕಿದ್ದ 18-44 ವರ್ಷದವರ ಲಸಿಕೆ ಅಭಿಯಾನಕ್ಕೆ ಮೇ 10 ರಿಂದ ಚಾಲನೆ ನೀಡಲಾಗಿತ್ತು. ಜನರು ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದು, ಎಲ್ಲೆಡೆ ನಾಳೆ ಬಾ ಎಂಬ ಬೋರ್ಡ್​ಗಳು ಕಂಡು ಬರುತ್ತಿದೆ. ಲಸಿಕೆ ಕೊರತೆ ಹಿನ್ನಲೆ ಸರ್ಕಾರ ಪೇಚಿಗೆ ಸಿಲುಕುವಂತೆ ಆಗಿದ್ದು, ಈ ಹಿನ್ನಲೆ ಈ ಕಾರ್ಯಕ್ಕೆ ಮತ್ತೆ ತಡೆ ನೀಡಿ ಪೂರ್ಣ ಪ್ರಮಾಣದ ಸಿದ್ಧತೆ ಬಳಿಕ ಆರಂಭಿಸುವಂತೆ ನಿರ್ದೇಶನ ನೀಡಲಾಗಲಿದೆ

ಆಕ್ಸಿಜನ್​ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ

ರಾಜ್ಯಕ್ಕೆ 1200 ಮೆಟ್ರಿಕ್​ ಟನ್​ ಆಕ್ಸಿಜನ್​ ನೀಡಲಾಗಿದೆ. ಸಾಕಷ್ಟು ಆಕ್ಸಿಜನ್​ ಸಿಲಿಂಡರ್​ ರಾಜ್ಯದಲ್ಲಿ ಲಭ್ಯತೆ ಇದ್ದು, ಜಿಲ್ಲೆಗಳಲ್ಲಿ ಆಕ್ಸಿಜನ್​ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಲ್ಲಿಯೇ ಕೊರತೆ ಉಂಟಾದರೆ ಕೂಡಲೇ ಬಗೆಹರಿಸಬೇಕು. ಜಿಲ್ಲೆಗಳಲ್ಲಿ ಆಕ್ಸಿಜನ್ ಪೂರೈಕೆ ಕೊಂಡಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.  ಐಸಿಯು ಬೆಡ್​ಗಳ ಸಂಖ್ಯೆ ಹೆಚ್ಚಿಸುವತ್ತ ಕೂಡ ಗಮನಹರಿಸಬೇಕು. ಐಸಿಯು ಬೆಡ್​ ಸಮಸ್ಯೆ ಎಲ್ಲಡೆ ಉಂಟಾಗುತ್ತಿದ್ದು, ಈ ಸಂಬಂಧ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *