ಕಲಬುರಗಿ ನಗರದಲ್ಲಿ 50 ಹಾಸಿಗೆಯ 2 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ:ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ : ಕಲಬುರಗಿ ನಗರದಲ್ಲಿನ ಅರೋಗ್ಯ ವ್ಯವಸ್ಥೆ ಮತ್ತಷ್ಟು ಸುಧಾರಣೆ ಮತ್ತು ಭವಿಷ್ಯದ ಹಿತದೃಷ್ಠಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಹಾಸಿಗೆಯ 2 ಸಮುದಾಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ‌ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳು ಮತ್ತು ಕೋವಿಡ್-19 ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಆಸ್ಪತ್ರೆ ನಿರ್ಮಿಸಲಾಗುವುದು. ಇದಕ್ಕಾಗಿ ಮಂಡಳಿಯು ತಲಾ ₹ 5 ಕೋಟಿ ವೆಚ್ಚ ಮಾಡಲಿದೆ. ಮುಂದಿನ ಒಂದು ವರ್ಷದಲ್ಲಿ ಇದನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಕೂಡಲೇ ನಿವೇಶನ ಗುರುತಿಸಿ ಮಾಹಿತಿ ನೀಡುವಂತೆ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ‌ ಲೋಖಂಡೆ ಅವರಿಗೆ ದತ್ತಾತ್ರೇಯ ಪಾಟೀಲ ರೇವೂರ ಅವರು ಸೂಚಿಸಿದರು.

ಇದಲ್ಲದೆ ಜಿಲ್ಲೆಯ ಚಿತ್ತಾಪುರ, ವಾಡಿ, ಆಳಂದ, ಅಫಜಲಪೂರ, ಶಹಾಬಾದ ಸಮುದಾಯ/ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಇಲ್ಲಿ ಮಿನಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿಯೂ ಆರೋಗ್ಯ ಸಂಸ್ಥೆಗಳು ಬಲವರ್ಧನೆಗೆ ಒತ್ತು ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ತಾಲೂಕಿನ ಹಿರೇಸಾವಳಗಿಯ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರದತಿಸಬೇಕು. ಇದಕ್ಕೆ ಬೇಕಿದಲ್ಲಿ‌ ಮಂಡಳಿಯಿಂದ ಅನುದಾನ‌ ನೀಡಲಾಗುವುದು ಎಂದರು.

ಕಲಬುರಗಿ ಜಿಲ್ಲೆಯ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಸ್ತುತ 40 ವೆಂಟಿಲೇಟರ್ ಗಳಿದ್ದು, ಇಂದಿನ‌ ಪರಿಸ್ಥಿತಿಗೆ ಇವು ಸಾಕಾಗುವುದಿಲ್ಲ. ಇನ್ನೂ 25 ವೆಂಟಿಲೇಟರ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಳಿಯಿಂದ ಅನುದಾನ ನೀಡಲಾಗುವುದು. ಭವಿಷ್ಯದ ಹಮುಂದಾಲೋಚನೆಯಿಂದ ಜಿಮ್ಸ್ ನಲ್ಲಿ ಪ್ರಸ್ತುತವಿರುವ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಜೊತೆಗೆ ಆಕ್ಸಿಜನ್ ಜನರೇಟರ್ ಪ್ಲ್ಯಾಂಟ್ ಸ್ಥಾಪನೆ ಮಾಡಲಾಗುವುದು. ಈ ಕುರಿತು ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಳಿಯು ಅನುಮೋದನೆ ನೀಡಲಿದೆ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರಿಗೆ ದತ್ತಾತ್ರೇಯ ಪಾಟೀಲ ತಿಳಿಸಿದರು.

ಸಿ.ಟಿ.ಸ್ಕ್ಯಾನ್ ಏಕೆ‌ ಇನ್ನು ಸ್ಥಾಪಿಸಿಲ್ಲ: ಮಂಡಳಿಯಿಂದ ಜಿಮ್ಸ್ ಆಸ್ಪತ್ರೆಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಸಿ.ಟಿ ಸ್ಕ್ಯಾನ್ ಸೆಂಟರ್ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಿದರು ಇದುವರೆಗೆ ಕೇಂದ್ರ ಏಕೆ ಸ್ಥಾಪನೆಯಾಗಿಲ್ಲ ಎಂದು ದತ್ತಾತ್ರೇಯ ಪಾಟೀಲ್ ಅವರು ಜಿಮ್ಸ್ ನಿರ್ದೇಶಕಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ. ಕವಿತಾ ಪಾಟೀಲ್ ಅವರು ಈ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ, ಟೆಂಡರನಲ್ಲಿ ಬಿಡ್ಡುದಾರರು 2015ರ ಉಪಕರಣಗಳನ್ನು ಇಂದಿನ ಮಾಡೆಲ್ ಎಂದು ತಪ್ಪಾಗಿ ನಮೂದಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದರು. ಇದಕ್ಕೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ತಮಗೆ ಸೂಕ್ತವೆನಿಸದೆ‌ ಇದ್ದಲ್ಲಿ ಈ ಟೆಂಡರ್ ರದ್ದುಗೊಳಿಸಿ ಮರು ಟೆಂಡರ್ ಕರೆಸು ಬೇಗ ಸೆಂಟರ್ ಸ್ಥಾಪಿಸಿ‌ ಎಂದು ಸೂಚನೆ ನೀಡಿದರು.

ಜಿಮ್ಸ್ ಆಸ್ಪತ್ರೆ ಸುತ್ತಮುತ್ತ ಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಕೊಡಿ. ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆ ತತ್ತರಿಸಿದ್ದು, ಜನರ ಜೀವ ಉಳಿಸಲು ಬೇಕಾಗಿರುವ ಅಗತ್ಯ ಉಪಕರಣಗಳ ಪಟ್ಟಿಯನ್ನು ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆಗಳು ಮಂಡಳಿಗೆ 2 ದಿನದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಮಂಡಳಿಯೂ ಒದನ್ನು ಪ್ರಥಮಾದ್ಯತೆ ನೀಡಿ ಕೂಡಲೆ ಅನುಮೋದನೆ‌ ನೀಡಿ ಅನುದಾನ‌ ನೀಡಲಾಗುವುದು ಎಂದರು.

ಕಲಬುರಗಿ ನಗರ ಸ್ಯಾನಿಟೈಸ್ ಮಾಡಿ: ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಿಗೆ ಹರಡುತ್ತಿದ್ದು, ಇದರ ಕಡಿವಾಣಕ್ಕೆ ಪಾಲಿಕೆ ನಗರದಾದ್ಯಂತ ಸೋಡಿಯಂ ಹೈಪೊಕ್ಲೋರೈಡ್ ಸಿಂಪಡಣೆ‌ ಮಾಡಬೇಕು. ಇದಕ್ಕಾಗಿ ಅಗ್ನಿಶಾಮಕ ವಾಹನಗಳನ್ನು ಬಳಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ.ವಿನೋದ ಅವರಿಗೆ ದತ್ತಾತ್ರೇಯ ಪಾಟೀಲ ರೇವೂರ ಅವರು ಸೂಚಿಸಿದರು.

ವಿದ್ಯುತ್ ಶವಾಗಾರ ಕಾಮಗಾರಿ 20 ದಿನದಲ್ಲಿ ಪೂರ್ಣಗೊಳಿಸಿ: ಕಲಬುರಗಿ ನಗರದ ಪ್ರಶಾಂತ‌ ನಗರ, ಅಜಾದ್‌ ನಗರ ಹಾಗೂ ಕಪನೂರನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಶವಾಗಾರ ಕಾಮಗಾರಿಯನ್ನು 20 ದಿನದಲ್ಲಿ ಪೂರ್ಣಗೊಳಿಸುವಂತೆ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ‌ ಮಲ್ಲಿಕಾರ್ಜುನ ಜೇರಟಗಿ ಅವರಿಗೆ ಕ.ಕೆ.ಆರ್.ಡಿ.ಬಿ. ಅಧ್ಯಕ್ಷರು ಸೂಚಿಸಿದರು.

373 ಕೋ ರೂ. ಬಿಡುಗಡೆ: 2021-22ನೇ ಸಾಲಿಗೆ ರಾಜ್ಯ ಸರ್ಕಾರ ಮಂಡಳಿಗೆ ₹ 1500 ಕೋಟಿ‌ ಅನುದಾನ ಘೋಷಿಸಿ ಮೊದಲನೇ‌ ಕಂತಿನ ರೂಪದಲ್ಲಿ ₹ 373 ಕೋಟಿ ಅನುದಾನ‌ ಬಿಡುಗಡೆ ಮಾಡಿದೆ. ಜಿಲ್ಲೆಯ ಕ್ರಿಯಾ ಯೋಜನೆ ಬೇಗ ಸಲ್ಲಿಸಿದಲ್ಲಿ ಅದಕ್ಕೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು‌ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ಅಧ್ಯಕ್ಷರು ನಿರ್ದೇಶನ‌ ನೀಡಿದರು.

ಇದೇ‌ ಸಂದರ್ಭದಲ್ಲಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ವಿವಿಧ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಲಾಯಿತು.

ಸಭೆಯಲ್ಲಿ ಡಿ.ಸಿ.ಪಿ. ಕಿಶೋರ ಬಾಬು, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್,ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ‌ ಜಿಲ್ಲಾಧಿಕಾರಿ ಡಾ.ಶಂಕರ‌ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಇ.ಎಸ್.ಐ.ಸಿ. ಡೀನ್ ಡಾ.ಲೋಬೋ, ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ‌ಡಾ.ಅಂಬಾರಾಯ ರುದ್ರವಾಡಿ, ಆರದ.ಚಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ ಸೇರಿದಂತೆ
ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ಅನುಷ್ಠಾನ ಏಜೆನ್ಸಿ ಇಲಾಖೆಯ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *