ಮಾರುಕಟ್ಟೆಯಲ್ಲಿ ಧಾರಣೆ ತೀವ್ರ ಕುಸಿತ; ಸರಕಾರದ ಬೆಂಬಲವೂ ಇಲ್ಲ; ಕಂಗಾಲಾದ ಭತ್ತ ಬೆಳೆಗಾರರು

ಲೈಟ್ಸ್‌:

  • ಮಾರುಕಟ್ಟೆಯಲ್ಲಿ ಭತ್ತದ ಧಾರಣೆ ಕಳೆದ ವರ್ಷಕ್ಕಿಂತಲೂ ಕುಸಿತ
  • ಸರಕಾರದ ಬೆಂಬಲವೂ ಸಿಗದೆ ಕಂಗಾಲಾದ ರೈತರು
  • ರೈತರನ್ನು ನಿರುತ್ಸಾಹಿಗಳನ್ನಾಗಿ ಮಾಡಿದ ಭತ್ತದ ಧಾರಣೆ

ಶಿವಮೊಗ್ಗ: ರಾಜ್ಯದೆಲ್ಲೆಡೆ ಬೇಸಿಗೆ ಹಂಗಾಮು ಭತ್ತ ಕೊಯ್ಲುಆರಂಭವಾಗಿದ್ದು ಮಾರುಕಟ್ಟೆಯಲ್ಲಿ ಭತ್ತದ ಧಾರಣೆಯು ರೈತರನ್ನು ನಿರುತ್ಸಾಹಿಗಳನ್ನಾಗಿ ಮಾಡಿದೆ.

ಇನ್ನೊಂದು ವಾರದಲ್ಲಿ ಹೊಸ ಭತ್ತ ಮಾರುಕಟ್ಟೆಗೆ ಬರಲಾರಂಭಿಸಲಿದೆ. ಆದರೆ, ಮಾರುಕಟ್ಟೆಯಲ್ಲಿ ಧಾರಣೆ ಮಾತ್ರ ಕಳೆದ ವರ್ಷಕ್ಕಿಂತಲೂ ಕುಸಿದಿದ್ದು ರೈತರನ್ನು ಬೇಸರಗೊಳಿಸಿದೆ. ಸಣ್ಣ ಭತ ಕ್ವಿಂಟಾಲ್‌ಗೆ 1400 ರೂ. ಇದ್ದರೆ, ಯಾವಾಗಲೂ ಉತ್ತಮ ಧಾರಣೆ ತಂದುಕೊಡುವ ಮತ್ತು ಕೇರಳಕ್ಕೆ ರವಾನೆಯಾಗುವ ಜ್ಯೋತಿ ಭತ್ತ 1450 ರೂ. ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1600 ರೂ. ಇತ್ತು. ಮಾರುಕಟ್ಟೆಯಲ್ಲಿ ಎಲ್ಲ ಧಾರಣೆಗಳು ಕಳೆದ ವರ್ಷಕ್ಕಿಂತ ಭಾರಿ ಪ್ರಮಾಣದಲ್ಲಿ ಏರಿಕೆಯಾದರೆ, ರೈತರು ಉತ್ಪಾದಿಸುವ ಯಾವುದೇ ಉತ್ಪನ್ನ ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಲೇ ಇವೆ. ರಸಗೊಬ್ಬರದ ಧಾರಣೆಯು ಪ್ರತಿವರ್ಷ ನಿರಂತರವಾಗಿ ಏರುಮುಖವಾಗಿದ್ದರೆ, ಭತ್ತ ಇಳಿಮುಖವಾಗಿದೆ. ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಯಾವುದೇ ತಳಿಯ ಭತ್ತದ ದರ 1600 ರೂ.ಗಿಂತ ಹೆಚ್ಚಿಲ್ಲ. ಇನ್ನೊಂದು ವಾರದಲ್ಲಿ ಭತ್ತದ ಆವಕ ಹೆಚ್ಚಳವಾಗುವುದರಿಂದ ಧಾರಣೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಉತ್ಪಾದನಾ ವೆಚ್ಚವೂ ಇಲ್ಲ:
ಒಂದು ಎಕರೆಯಲ್ಲಿ ಭತ್ತ ಬೆಳೆಯಲು ಬೇಸಾಯ, ನಾಟಿ, ಎರಡು ಬಾರಿ ಗೊಬ್ಬರ, ಎರಡು ಬಾರಿ ಕಳೆ ತೆಗೆಯುವುದು, ಔಷಧ, ಕೊಯ್ಲು, ಒಕ್ಕಲು ಸೇರಿ ರೈತರಿಗೆ ಸರಾಸರಿ 24 ಸಾವಿರ ರೂ. ಖರ್ಚು ಬರುತ್ತದೆ. 6 ತಿಂಗಳ ಕಾಲ ಅಷ್ಟೊಂದು ಬಂಡವಾಳ ಹಾಕಿ ಸರಾಸರಿ 18ರಿಂದ 20 ಕ್ವಿಂಟಾಲ್‌ ಭತ್ತ ಬೆಳೆಯಬಹುದು. 20 ಕ್ವಿಂಟಾಲ್‌ ಬಂದರೂ ಈಗಿನ ಧಾರಣೆ ಪ್ರಕಾರ ರೈತನಿಗೆ 28ಸಾವಿರ ರೂ. ಸಿಗುತ್ತದೆ. ರೈತನ ಕೂಲಿ ಲೆಕ್ಕ ಬಿಟ್ಟು 6 ತಿಂಗಳ ದುಡಿಮೆಗೆ ಆತನಿಗೆ ಸಿಗುವುದು ಕೇವಲ 4 ಸಾವಿರ. ಉತ್ಪಾದನಾ ವೆಚ್ಚ ಹೆಚ್ಚಾಗಿ ಪ್ರತಿ ಬೆಳೆಯಲ್ಲೂ ನಷ್ಟ ಅನುಭವಿಸಬೇಕಾದ ಕಾರಣಕ್ಕೆ ರೈತರು ಭತ್ತದ ಬೆಳೆಯಿಂದ ವಿಮುಖರಾಗಿ ವಾಣಿಜ್ಯ ಬೆಳೆಗಳತ್ತ ವಾಲುತ್ತಿದ್ದಾರೆ.

ವ್ಯಾಪಾರಿಗಳ ನಿರಾಸಕ್ತಿ:
ಪ್ರತಿವರ್ಷ ಮನೆ ಬಾಗಿಲಿಗೆ ಬಂದು ಭತ್ತ ಖರೀದಿಸುತ್ತಿದ್ದ ವ್ಯಾಪಾರಿಗಳು ಈ ಬಾರಿ ಇದೂವರೆಗೆ ಖರೀದಿಗೆ ಮನಸ್ಸು ಮಾಡಿಲ್ಲ. ಧಾರಣೆ ಮತ್ತಷ್ಟು ಕುಸಿಯುವ ಸಾಧ್ಯತೆ ಕಾರಣಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಕೆಲವರು ಭತ್ತ ತೆಗೆದುಕೊಂಡರೂ ಹಣವನ್ನು ಲಾಕ್‌ಡೌನ್‌ ಮುಗಿದ ಬಳಿಕ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಭತ್ತ ದಾಸ್ತಾನಿಗೆ ಜಾಗದ ಕೊರತೆ ಕಾರಣಕ್ಕೆ ಶೇ.90ರಷ್ಟು ರೈತರು ಬಂದಷ್ಟು ಹಣಕ್ಕೆ ಮಾರುತ್ತಾರೆ.

ಅಕ್ಕಿ ದುಬಾರಿ
ರೈತರಿಂದಲೇ ಭತ್ತ ಖರೀದಿಸಿ ಹಲ್ಲಿಂಗ್‌ ಮಾಡಿದ ಅಕ್ಕಿಗೆ ಭತ್ತದ ನಾಲ್ಕು ಪಟ್ಟು ಅಂದರೆ ಕ್ವಿಂಟಾಲ್‌ಗೆ 3,500ರಿಂದ 4 ಸಾವಿರ ರೂ. ಇದೆ. ವ್ಯಾಪಾರಿಗಳ ಅಕ್ಕಿ ದರ ಯಾವಾಗಲೂ ಇಳಿಯುವುದಿಲ್ಲ. ರೈತನ ಭತ್ತಕ್ಕೆ ಯಾವಾಗಲೂ ಉತ್ತಮ ಧಾರಣೆ ಸಿಗುವುದಿಲ್ಲ.

ಬೆಂಬಲ ಬೆಲೆಗಿಂತ ಕಡಿಮೆ
ಕೇಂದ್ರ ಸರಕಾರ ಗ್ರೇಡ್‌ 1 ಭತ್ತಕ್ಕೆ ಕ್ವಿಂಟಾಲ್‌ಗೆ 1888 ರೂ. ಮತ್ತು ಸಾಮಾನ್ಯ ಭತ್ತಕ್ಕೆ 1868 ರೂ. ಬೆಂಬಲ ಬೆಲೆ ಘೋಷಿಸಿದೆ. ನಿಯಮ ಪ್ರಕಾರ ಬೆಂಬಲ ಬೆಲೆಗಿಂತ ಕಡಿಮೆಗೆ ಖರೀದಿಸುವಂತಿಲ್ಲ. ಆದರೆ, ಸರಕಾರ ಈ ವಿಷಯದಲ್ಲಿಇದೂವರೆಗೆ ಕಠಿಣ ಕಾನೂನು ರೂಪಿಸದೆ ಇರುವುದರಿಂದ ರೈತರ ಉತ್ಪನ್ನಗಳಿಗೆ ವ್ಯಾಪಾರಿಗಳು ದರ ನಿರ್ಧರಿಸುವಂತಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *