ಲಸಿಕೆ ಅಭಾವಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ : ಪ್ರಧಾನಿ ಭರವಸೆ
ನವದೆಹಲಿ : ಕೊರೊನಾ ಎರಡನೆ ಅಲೆ ವಿರುದ್ಧ ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಹೋರಾಟ ನಡೆಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗಳಿಗೆ ಜಮಾ ಮಾಡುವ ಕಾರ್ಯಕ್ರಮದ ನಂತರ ವಿಡಯೋ ಕಾನ್ಫ್ರೆನ್ಸ್ ಮೂಲಕ ಮಾತನಾಡಿದ ಮೋದಿ ಅವರು ಕಣ್ಣಿಗೆ ಕಾಣದ ವೈರಿಯ ವಿರುದ್ಧ ನಿರ್ಣಾಯಕ ಯುದ್ಧ ನಡೆಸುತ್ತಿರುವುದಾಗಿ ಘೋಷಿಸಿದರು.
ಸೋಂಕು ನಿವಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಇದುವರೆಗೂ 18 ಕೋಟಿ ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ. ಇದರ ಜತೆಗೆ ಎಲ್ಲರಿಗೂ ಲಸಿಕೆ ಹಾಕಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು. ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡವರ ದುಃಖ ನನಗೆ ಗೊತ್ತು ನಿಮ್ಮ ದುಃಖದಲ್ಲಿ ನಾನು ಸಮಾನ ಭಾಗೀದಾರ. ಇಂತಹ ದುಃಖದ ಸನ್ನಿವೇಶಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ನಿಮ್ಮ ಸರದಿ ಬಂದಾಗ ತಪ್ಪದೆ ನಿಮಗೆ ಲಸಿಕೆ ನೀಡುತ್ತೇವೆ ಅಲ್ಲಿಯವರೆಗೆ ತಾಳ್ಮೇಯಂದಿರಿ. ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಅವರು ಸಲಹೆ ನೀಡಿದರು. ಸೋಂಕಿನ ವಿರುದ್ಧ ಆರೋಗ್ಯ ಸಿಬ್ಬಂದಿಗಳು, ವಿಜ್ಞಾನಿಗಳು, ತಜ್ಞರು ಹಗಲು ರಾತ್ರಿ ಎನ್ನದೆ ಹೋರಾಡುತ್ತಿದ್ದಾರೆ. ಸ್ಥಳೀಯವಾಗಿ ಲಸಿಕೆ ಉತ್ಪಾದಿಸುವುದರ ಜತೆಗೆ ಅಮುದು ಮಾಡಿಕೊಳ್ಳುವ ಮೂಲಕ ಲಸಿಕೆ ಆಭಾವ ತಪ್ಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಆಯಾ ರಾಜ್ಯಗಳು ಆಕ್ಸಿಜನ್ ಸಿಲಿಂಡರ್ಗಳು, ರೆಮಿಡಿಸಿವಿರ್ ಮತ್ತಿತರ ಔಷಧಿಗಳ ಕಾಳಸಂತೆಕೋರರನ್ನು ಮಟ್ಟ ಹಾಕಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿಗಳು ಸೂಚಿಸಿದರು.ಮಹಾಮಾರಿ ಗ್ರಾಮೀಣ ಪ್ರದೇಶಗಳ ಮೇಲೂ ದಾಂಗುಡಿ ಇಡುತ್ತಿದ್ದು ರೈತರು ಸೋಂಕಿನಿಂದ ಬಚಾವಾಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಆಧ್ಯತೆ ನೀಡಬೇಕು ಎಂದು ಮೋದಿ ಮನವಿ ಮಾಡಿಕೊಂಡರು.
ನಮ್ಮದು ಧೃತಿಗೆಡುವ ರಾಷ್ಟ್ರವಲ್ಲ. ಜಯ ಸಿಗುವವರೆಗೆ ಹೋರಾಟ ನಡೆಸಿ ಗೆಲ್ಲುವ ದಕ್ಕಿಸಿಕೊಳ್ಳುವ ದೇಶ. ಕೊರೊನಾ ವಿರುದ್ಧದ ಹೋರಾಟದಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.