ಕೋಲಾರ: ಅಕ್ಕ- ತಂಗಿ ಇಬ್ಬರನ್ನು ಮದುವೆಯಾದ ಯುವಕ, ಈ ವಿವಾಹದ ಹಿಂದಿದೆ ತಂಗಿಯ ತ್ಯಾಗ!

ಹೈಲೈಟ್ಸ್‌:

  • ಕೋಲಾರದಲ್ಲಿ ಅಕ್ಕ-ತಂಗಿಯನ್ನು ಮದುವೆಯಾದ ವರ
  • ಈ ವಿವಾಹದ ಹಿಂದಿನ ಅಸಲಿಯತ್ತು ಏನು ಗೊತ್ತಾ?
  • ತಂಗಿಯ ತ್ಯಾಗಕ್ಕೆ ಇಡೀ ಊರಿಗೆ ಊರೇ ತಲೆಬಾಗಿದ ಕತೆ

ಕೋಲಾರ: ಸಾಮಾನ್ಯವಾಗಿ ಅಕ್ಕ ತಂಗಿ ಇಬ್ಬರನ್ನು ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬಹುಷಃ ನಾವೆಲ್ಲ ನೋಡಿರಬಹುದು. ಆದರೆ ಇಂತಹ ನೈಜ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ವರ ಹಾಗೂ ಇಬ್ಬರು ಪತ್ನಿಯರ ಫೋಟೊ ಮತ್ತು ಮದುವೆಯ ಆಮಂತ್ರಣ ಪತ್ರಿಕಯ ಫೋಟೊ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಅನೇಕರ ಹುಬ್ಬೇರಿಸುವಂತೆ ಮಾಡಿದೆ.

ಘಟನೆಯ ವಿವರ!
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿನ ಸುಪ್ರಿಯಾ ಮತ್ತು ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎನ್ನುವವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಕೋಲಾರದ ಪ್ರಸಿದ್ದ ಕುರುಡುಮಲೆ ದೇಗುಲದಲ್ಲಿ ಮದುವೆ ನಡೆದಿದ್ದು, ಮೇ ತಿಂಗಳ 7ರಂದು ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಆರತಕ್ಷತೆಯು ನೆರವೇರಿದೆ.

ತಂಗಿಯ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ!
ವರ ಉಮಾಪತಿಗೆ ಲಲಿತಾಳೊಂದಿಗೆ ಮದುವೆ ಫಿಕ್ಸ್‌ ಆಗಿತ್ತು. ಇನ್ನು ಉಮಾಪತಿ ಹಾಗೂ ಲಲಿತಾಳ ಮದುವೆಗೆ ಎಲ್ಲ ತಯಾರಿಗಳು ನಡೆದಿತ್ತು. ಆದರೆ ಲಲಿತಾಳ ಅಕ್ಕ ಸುಪ್ರಿಯಾ ಹುಟ್ಟು ಮೂಕಿಯಾಗಿದ್ದು, ಮಾತು ಬರುವುದಿಲ್ಲ. ಇದರಿಂದ ತಂಗಿ ಲಲಿತಾ ತುಂಬಾನೇ ಕುಗ್ಗಿ ಹೋಗಿದ್ದಳು. ತಾನು ಮದುವೆಯಾದರೆ ಅಕ್ಕ ಸುಪ್ರಿಯಾಳ ಜೀವನ ದಿಕ್ಕು ತೋಚದಂತೆ ಆಗಲಿದೆ.

ಆಕೆಯನ್ನು ಮದುವೆಯಾಗಲು ಯಾರು ಕೂಡ ಮುಂದೆ ಬರಲ್ಲ. ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂಬ ಟೆನ್ಷನ್‌ ತಂಗಿ ಲಲಿತಾಳಿಗೆ ಆಗುತ್ತೆ. ಹೀಗಾಗಿ ತಾನು ಮದುವೆಯಾಗುವ ಉಮಾಪತಿ ಬಳಿ ಈ ವಿಚಾರವನ್ನು ಹಂಚಿಕೊಳ್ಳುತ್ತಾಳೆ. ನಂತರ ಉಮಾಪತಿ ಬಳಿ ತನ್ನೊಂದಿಗೆ ಮೂಕಿಯಾಗಿರುವ ತನ್ನ ಅಕ್ಕನನ್ನು ಮದುವೆಯಾಗಲು ಮನವಿ ಮಾಡುತ್ತಾಳೆ. ಹೇಗೋ ಉಮಾಪತಿಯನ್ನು ಲಲಿತಾ, ಮದುವೆಯಾಗಲು ಒಪ್ಪಿಸುತ್ತಾಳೆ.

ನಂತರ ಮನೆಗೆ ಬಂದು ಅಕ್ಕ ಸುಪ್ರಿಯಾಳಿಗೆ ತಿಳಿ ಹೇಳಿ ಅವಳನ್ನು ಒಪ್ಪಿಸುತ್ತಾಳೆ. ಇನ್ನು ತನ್ನ ಪೋಷಕರನ್ನು ಒಪ್ಪಿಸುತ್ತಾಳೆ. ನಂತರ ಸಹೋದರಿಯರಿಬ್ಬರು ಒಬ್ಬ ಯುವಕನೊಂದಿಗೆ ಹಸಮಣೆ ಏರಿದ್ದಾರೆ. ಇನ್ನು ಇಬ್ಬರು ಯುವತಿಯರನ್ನ ಮದುವೆಯಾದ ಫೋಟೋ ಹಾಗೂ ಮದುವೆ ಲಗ್ನಪತ್ರಿಕೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾತು ಬಾರದ ಯುವತಿಗೆ ಬಾಳು ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ಮಂದಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಂಗಿಯ ತ್ಯಾಗ ಹಾಗೂ ಕಾರುಣ್ಯಕ್ಕೆ ಜನರು ತಲೆ ಬಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *