ಬೆಂಗಳೂರಿನಿಂದ ಬಿಡದಿಯ ತೋಟದ ಮನೆಗೆ ವಾಸ್ತವ್ಯ ಬದಲಿಸಿದ ಎಚ್‌ಡಿಕೆ ಕುಟುಂಬ

ಹೈಲೈಟ್ಸ್‌:

  • ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್‌ ಹಿನ್ನೆಲೆ
  • ತೋಟದ ಮನೆಗೆ ವಾಸ್ತವ್ಯ ಬದಲಿಸಿದ ಎಚ್‌ಡಿಕೆ ಕುಟುಂಬ
  • ಬೆಂಗಳೂರಿನಿಂದ ಬಿಡದಿಯ ತೋಟದ ಮನೆಗೆ ಶಿಫ್ಟ್
  • ಪತ್ನಿ,ಮಗ, ಸೊಸೆಯೊಂದಿಗೆ ಬಿಡದಿಯ ಮನೆಗೆ ಸ್ಥಳಾಂತರ

ಬಿಡದಿ: ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬ ಬೆಂಗಳೂರಿನಿಂದ ಬಿಡದಿಯ ತೋಟದ ಮನೆಗೆ ವಾಸ್ತವ್ಯ ಬದಲಿಸಿದೆ.

ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಹಾಗೂ ಸೊಸೆ ರೇವತಿ ಅವರೊಂದಿಗೆ ಎಚ್‌ಡಿಕೆ ನೆಲೆಸಿದ್ದಾರೆ. ಸಿಎಂ ಹುದ್ದೆಯಿಂದ ಇಳಿದ ನಂತರ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಹೆಚ್ಚಿನ ಸಮಯವನ್ನು ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಕಳೆಯುತ್ತಿದ್ದಾರೆ. ಮಗ ನಿಖಿಲ್‌ ಮದುವೆ, ಗ್ರಾಪಂ, ನಗರಸಭೆ ಚುನಾವಣೆಯ ಎಲ್ಲಾ ಕಾರ‍್ಯತಂತ್ರಗಳನ್ನೂ ತೋಟದ ಮನೆಯಿಂದಲೇ ಎಚ್‌ಡಿಕೆ ನಿರ್ವಹಿಸಿದ್ದರು.

ಬಿಡದಿಯ ತೋಟದ ಮನೆ ಈಗ ರಾಮನಗರ ಜಿಲ್ಲೆಗೆ ಜೆಡಿಎಸ್‌ ಪಕ್ಷದ ಶಕ್ತಿ ಕೇಂದ್ರವಾಗುವ ಜೊತೆಗೆ ಇಡೀ ರಾಜ್ಯದ ಚಟುವಟಿಕೆಗಳ ಕೇಂದ್ರ ಸ್ಥಾನವೂ ಆಗಿದೆ. ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಅವರುಗಳು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕಡೆಗೆ ಗಮನಹರಿಸುವುದು ಹಾಗೂ ರಾಮನಗರ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಗಳನ್ನು ಕರೆದು ಪಕ್ಷ ಸಂಘಟನೆ ಹಾಗೂ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸ್ಪಂಧಿಸುವ ಕೆಲಸಗಳು ತೋಟದ ಮನೆಯಿಂದಲೇ ಜರುಗುತ್ತಿವೆ.

ಗೋವುಗಳ ಆಗಮನ:
ಬಸವ ಜಯಂತಿ ದಿನವಾದ ಶುಕ್ರವಾರ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನಾಲ್ಕು ಗೋವುಗಳನ್ನು ತಮ್ಮ ತೋಟದ ಮನೆಗೆ ತರಿಸಿಕೊಂಡಿದ್ದಾರೆ. ಕಪಿಲ, ಸ್ವರ್ಣಕಪಿಲ ಹಾಗೂ ಗೀರ್‌ ತಳಿಯ 4 ಹಸುಗಳಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದಾರೆ.

‘ರಾಜಕೀಯ ಮತ್ತು ಕೃಷಿ ಚಟುವಟಿಕೆ ದೃಷ್ಠಿಯಿಂದ ರಾಮನಗರ ನನ್ನ ಕರ್ಮಭೂಮಿ, ಬಿಡದಿಯ ಕೇತಗಾನಹಳ್ಳಿ ನನ್ನ ಕೃಷಿ ಭೂಮಿಯ ಕಡೆ ಗಮನಹರಿಸುತ್ತಿದ್ದೇನೆ. ಬಸವ ಜಯಂತಿಯ ಶುಭದಿನದಂದು ಕಪಿಲ, ಸ್ವರ್ಣಕಪಿಲ ಗೀರ್‌ ತಳಿಯ ನಾಲ್ಕು ಗೋವುಗಳನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಗಿದೆ. ಹಸುಗಳನ್ನು ನನ್ನ ಕುಟುಂಬ ಭಕ್ತಿಪೂರ್ವಕವಾಗಿ ಪೂಜೆ ನೆರವೇರಿಸಿದೆ.’
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *