Titanic Tragedy: ಬಾಟಲಿಯೊಳಗೆ ಬಾಲಕಿಯ ಪತ್ರ, ಹಡಗು ಮುಳುಗುವ ಮುನ್ನ ಬರೆದಿದ್ದ ಪತ್ರದ ಬಗ್ಗೆ ಹತ್ತಾರು ಪ್ರಶ್ನೆ !

Titanic Tragedy: ಇಂಗ್ಲೆಂಡ್‍ನ ಸೌತ್‍ಹ್ಯಾಂಪ್ಟನ್‍ನಿಂದ ನ್ಯೂಯಾರ್ಕ್‍ಗೆ ತನ್ನ ಮೊದಲ ಪ್ರಯಾಣ ಬೆಳೆಸಿದ, ಆ ಕಾಲದ ಬೃಹತ್ ಹಡಗು ಟೈಟಾನಿಕ್, ತೀರ ಬಿಟ್ಟ ನಾಲ್ಕು ದಿನಗಳಲ್ಲಿ ಮಹಾಸಾಗರದಲ್ಲಿ ಮುಳುಗಿ, ದುರಂತ ಅಂತ್ಯ ಕಂಡಿತ್ತು. ಕೆನಡಾದ ನ್ಯೂಬ್ರನ್ಸ್‌ವಿಕ್‌ನ ಕುಟುಂಬವೊಂದಕ್ಕೆ, 2017ರಲ್ಲಿ ಫಂಡಿ ಕೊಲ್ಲಿಯ ತೀರದಲ್ಲಿ ಪತ್ರವನ್ನೊಳಗೊಂಡಿದ್ದ ಬಾಟಲಿಯೊಂದು ಸಿಕ್ಕಿತ್ತು. ಟೈಟಾನಿಕ್ ಹಡಗು ದುರಂತದಲ್ಲಿ ಮೃತಪಟ್ಟಿದ್ದ, 12 ವರ್ಷದ ಫ್ರೆಂಚ್ ಶಾಲಾ ಬಾಲಕಿ ಮತಿಲ್ಡ್ ಲಿಫೆವರ್ ಆ ಪತ್ರವನ್ನು ಬರೆದಿದ್ದಳು ಎನ್ನಲಾಗುತ್ತಿದೆ. ಕೆನಡಾದ ಸಾರ್ವಜನಿಕ ವಿಶ್ವವಿದ್ಯಾನಿಲಯ, ದ ಯುನಿವರ್ಸಿಟೆಡು ಕ್ಯುಬೆಕ್ ಅ ರಿಮೌಸ್ಕಿ, ಈ ಪತ್ರವನ್ನು ಪ್ರಸ್ತುತ ಸಾರ್ವಜನಿಕರ ಮುಂದೆ ಬಿಡುಗಡೆಮಾಡಿದ್ದು, ಅದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಸಹಾಯ ಮಾಡಬೇಕೆಂದು ತಜ್ಞರು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

1899ರಲ್ಲಿ ಜನಿಸಿದ್ದ ಲಿಫೆವರ್, ನ್ಯೂಯಾರ್ಕ್‍ನಲ್ಲಿರುವ ತನ್ನ ತಂದೆ ಮತ್ತು ಒಡಹುಟ್ಟಿದವರನ್ನು ಕಾಣಲು, ತಾಯಿ ಮೇರಿ ಜೊತೆ ಟೈಟಾನಿಕ್‍ನಲ್ಲಿ ಪ್ರಯಾಣಿಸುತ್ತಿದ್ದಳು. 1912ರ ಏಪ್ರಿಲ್ 15ರಂದು RMS Titanic ಹಿಮಶಿಖರಕ್ಕೆ ಢಿಕ್ಕಿ ಹೊಡೆದು, ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದಾಗ, ಅದರಲ್ಲಿ ಪ್ರಯಾಣಿಸುತ್ತಿದ್ದ 2224 ಮಂದಿ ಪೈಕಿ ಸುಮಾರು 1500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಲಿಫೆವರ್ ಕೂಡ ತನ್ನ ತಾಯಿಯೊಂದಿಗೆ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಳು. ಆ ಕಾಲದ ಬೃಹತ್‍ ಹಡಗು ಟೈಟಾನಿಕ್, ಇಂಗ್ಲೆಂಡ್‍ನ ಸೌತ್‍ಹ್ಯಾಂಪ್ಟನ್‍ನಿಂದ ನ್ಯೂಯಾರ್ಕ್ ನಗರಕ್ಕೆ ತನ್ನ ಮೊದಲ ಪ್ರಯಾಣವನ್ನು ಆರಂಭಿಸಿತ್ತು. ಅದು ತೀರವನ್ನು ಬಿಟ್ಟ ನಾಲ್ಕು ದಿನಗಳ ಬಳಿಕ ಮಹಾಸಾಗರದಲ್ಲಿ ಮುಳುಗಡೆಯಾಗಿ ದುರಂತ ಅಂತ್ಯ ಕಂಡಿತ್ತು.

ಸಿಬಿಸಿ ವರದಿಯ ಪ್ರಕಾರ, 1912ರ ಏಪ್ರಿಲ್ 13ರ ದಿನಾಂಕವನ್ನು ಹೊಂದಿರುವ ಈ ಪತ್ರ, ಫ್ರೆಂಚ್‌ ಭಾಷೆಯಲ್ಲಿದ್ದು ”ನಾನು ಈ ಬಾಟಲಿಯನ್ನು ಅಟ್ಲಾಂಟಿಕ್‍ನ ಮಧ್ಯದಲ್ಲಿ ಸಾಗರಕ್ಕೆ ಎಸೆಯುತ್ತಿದ್ದೇನೆ. ನಾವು ಕೆಲವೇ ದಿನಗಳಲ್ಲಿ ನ್ಯೂಯಾರ್ಕ್ ತಲುಪಲಿದ್ದೇವೆ. ಇದು ಯಾರಿಗಾದರೂ ಸಿಕ್ಕಿದರೆ, ಲಿಫೆವರ್ ಕುಟುಂಬ ಲೀವಿನ್‍ನಲ್ಲಿದೆ ಎಂದು ಹೇಳಿ” ಎಂದು ಬರೆಯಲಾಗಿದೆ.

ಇತಿಹಾಸಕಾರರಿಗೆ ಈ ಪತ್ರ , ಟೈಟಾನಿಕ್ ಮುಳುಗಿದ ಕಾಲದ್ದೆಂದು ಅನಿಸಿದ್ದರೂ, ಅದು ನಿಜವಾಗಿಯೂ ಲಿಫೆವರ್‌ ಬರೆದಿದ್ದೋ, ಅಥವಾ ಟೈಟಾನಿಕ್ ಮುಳುಗಡೆಯ ಕುರಿತು ದೊಡ್ಡ ಮಟ್ಟದಲ್ಲಿ ವರದಿಗಳನ್ನು ಮಾಡುತ್ತಿದ್ದ ಪತ್ರಿಕೆಗಳು ಸೃಷ್ಟಿಸಿರುವ ನಕಲಿ ಪತ್ರವಾಗಿರಬಹುದೇ ಎಂಬುದರ ಬಗ್ಗೆ ಭಿನ್ನಾಭಿಪಾಯಗಳಿವೆ. ಯಾಕೆಂದರೆ, ಆ ಸಮಯದಲ್ಲಿ ಪತ್ರಿಕೆಗಳು, , ಹಡಗು ದುರಂತದಲ್ಲಿ ಸಾವನ್ನಪಿದ್ದವರು ಹೇಳಿದ ಕೊನೆಯ ಮಾತುಗಳು ಅಥವಾ ಬರೆದ ಕೊನೆಯ ಬರಹಗಳ ಬಗ್ಗೆ ವರದಿ ಮಾಡುತ್ತಿದ್ದವು. ಆ ಉದ್ದೇಶಕ್ಕಾಗಿಯೇ ಯಾರಾದರೂ ಸುಳ್ಳು ಪತ್ರವನ್ನು ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಕೆಲವು ಇತಿಹಾಸಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯದ ಇತಿಹಾಸದ ಪ್ರೊಫೆಸರ್ ಮ್ಯಾಕ್ಸಿಮ್ ಗೋಚಿಯೇ ಪ್ರಕಾರ, ಈ ಪತ್ರ ‘ಅಮೆರಿಕಾ ಕಡಲತೀರದಲ್ಲಿ ದೊರೆತ ಮೊದಲ ಟೈಟಾನಿಕ್‌ ಕಲಾಕೃತಿ ಆಗಿರಬಹುದು. “ಇದು ದುರಂತ ನಡೆದ ಸಮಯದಲ್ಲಿ ಸೃಷ್ಟಿ ಮಾಡಲಾದ ನಕಲಿ ದಾಖಲೆ ಆಗಿರಬಹುದು ಅಥವಾ ಇತ್ತೀಚೆಗೆ ಸೃಷ್ಟಿ ಮಾಡಿರುವಂತದ್ದು ಆಗಿರಲೂಬಹುದು” ಎಂದು ಸಿಬಿಸಿಗೆ ನಿಕೊಲಾಸ್ ಬಿಯಾಡ್ರಿ ತಿಳಿಸಿದ್ದಾರೆ. “ಆದರೆ ಇದುವರೆಗೆ ಇದೊಂದು ಸುಳ್ಳು ದಾಖಲೆ ಎಂದು ಸಾಬೀತುಪಡಿಸುವಂತಹ ಯಾವುದೇ ಸಾಕ್ಷಿ ದೊರಕಿಲ್ಲ” ಎಂದಿರುವ ಬಿಯಾಡ್ರಿ, ಎಲ್ಲಾ ಸಾಧ್ಯತೆಗಳು ಆಸಕ್ತಿದಾಯಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *