#ರಫೇಲ್ LIVE: ಭಾರತದ ನೆಲ ಮುತ್ತಿಕ್ಕಿದ ಆಗಸದ ಬೇಟೆಗಾರನಿಗೆ ಅದ್ದೂರಿ ಸ್ವಾಗತ!
ಭಾರತೀಯ ವಾಯುಸೇನೆಗೆ ಇಂದು(ಬುಧವಾರ) ಫ್ರಾನ್ಸ್ನ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯ ಅಂಬಾಲಾ ವಾಯುನೆಲೆಯನ್ನು ತಲುಪಿವೆ. ರಫೇಲ್ ಯುದ್ಧ ವಿಮಾನಗಳಿಗೆ ಭಾರತೀಯ ವಾಯುಸೇನೆ ಅದ್ದೂರಿ ಸ್ವಾಗತ ನೀಡಿದೆ.
ಅಂಬಾಲಾ: ಭಾರತದ ದಶಕಗಳ ಕನಸು ನಸಾಗಿದೆ. ಭಾರತದ ಯುದ್ಧ ನೀತಿಯನ್ನೇ ಬದಲಿಸುವ ತಾಕತ್ತಿರುವ ಡಸ್ಸಾಲ್ಟ್ ರಫೇಲ್ ಯುದ್ಧ ವಿಮಾನಗಳು ಭಾರತದ ನೆಲವನ್ನು ಚುಂಬಿಸಿವೆ. ಅಂಬಾಲಾ ವಾಯುನೆಲೆಗೆ ಯಶಸ್ವಿಯಾಗಿ ಬಂದಿಳಿದಿರುವ ಐದು ರಫೇಲ್ ಯುದ್ಧ ವಿಮಾನಗಳು, ಸಮಸ್ತ ಭಾರತೀಯರ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ.
ಫ್ರಾನ್ಸ್ನ ಮೆರಿಗ್ನಾಕ್ ವಾಯುಸೇನಾ ನೆಲೆಯಿಂದ ಹೊರಟಿದ್ದ ಐದು ರಫೇಲ್ ಯುದ್ಧ ವಿಮಾನಗಳು, ಯುಎಇ ಮಾರ್ಗವಾಗಿ ಇಂದು ಅಧಿಕೃತವಾಗಿ ಭಾರತೀಯ ವಾಯುಸೇನೆಯ ಅಂಬಾಲಾ ವಾಯುನೆಲೆಯನ್ನು ತಲುಪಿವೆ.
ಅಂಬಾಲಾ ವಾಯುನೆಲೆಗೆ ಆಗಮಿಸಿದ ಐದು ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಿದ ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್ಕೆಎಸ್ ಬದೌರಿಯಾ ಹಾಗೂ ಇತರ ಹಿರಿಯ ಅಧಿಕಾರಿಗಳು, ವಾಯುಸೇನೆಗೆ ಅವುಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಮುಂದಿನ ಆಗಸ್ಟ್ನಲ್ಲಿ ಈ ರಫೇಲ್ ಯುದ್ಧ ವಿಮಾನಗಳಿಗೆ ಅಧಿಕೃತವಾದ ಸ್ವಾಗತ ದೊರೆಯಲಿದ್ದು, ಅದ್ದೂರಿ ಸಮಾರಂಭದ ಮೂಲಕ ರಫೇಲ್ ಸಂಭ್ರಮಾಚರಣೆ ನಡೆಯಲಿದೆ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ.