ಆಧಾರ್ ಕಾರ್ಡ್ ಇಲ್ಲ ಅಂದ ಮಾತ್ರಕ್ಕೆ ಕರೋನಾ ಲಸಿಕೆ ನಿರಾಕರಿಸಬಹುದೇ.?
ನವದೆಹಲಿ : ಕರೋನಾ ಲಸಿಕೆ (Coronavirus) ನೀಡಬೇಕಾದರೆ ಇದೀಗ ಆಧಾರ್ ಕಾರ್ಡ್ ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ನಡುವೆ, ಪ್ರಶ್ನೆಯೊಂದು ಉದ್ಭವವಾಗಿದೆ. ಒಂದು ವೇಳೆ ನಿಮ್ಮಲ್ಲಿ ಆಧಾರ್ ಕಾರ್ಡ್ (Aadhaar card) ಇಲ್ಲದೇ ಹೋದ ಪಕ್ಷದಲ್ಲಿ ಕರೋನಾ ಲಸಿಕೆ ನಿರಾಕರಿಸಬಹುದೇ..? ಈ ಪ್ರಶ್ನೆ ಹಲವರ ಮನಸ್ಸಿಗೂ ಬಂದಿರಬಹುದು. ಹಲವರಿಗೆ ಅನುಭವಕ್ಕೆ ಬಂದಿರಬಹುದು.
ಇದಕ್ಕೆ ಯುಐಡಿಎಐ ( UIDAI) ಹೇಳಿದ್ದೇನು..?
ಆಧಾರ್ (Aadhaar) ಕಡ್ಡಾಯ ಎಂಬ ಪ್ರಶ್ನೆಗೆ ಯುಐಡಿಎಐ ಸ್ಪಷ್ಟನೆ ನೀಡಿದೆ. ಆಧಾರ್ ಇಲ್ಲ ಎಂದ ಮಾತ್ರಕ್ಕೆ ಯಾವುದೇ ವ್ಯಕ್ತಿಗೆ ಲಸಿಕೆ ನೀಡುವುದು, ಔಷಧಿ ನೀಡುವುದು, ಆಸ್ಪತ್ರೆಗೆ (Hospital) ಸೇರಿಸಿಕೊಳ್ಳುವುದನ್ನು ನಿರಾಕರಿಸುವಂತಿಲ್ಲ. ಆಧಾರ್ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಯಾವುದೇ ಅವಶ್ಯಕ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಯುಐಡಿಎಐ (UIDAI) ಹೇಳಿದೆ.
ಯುಐಡಿಎಐ ಯಾಕೆ ಹೀಗೆ ಹೇಳಿದ್ದು..?
ಕರೋನಾ (COVID-19) ಮಹಾಮಾರಿಯ ಎರಡನೇ ಅಲೆ ಹರಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಇಲ್ಲ ಎಂಬ ನೆಪ ಹೇಳಿ ಹಲವು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ್ದ ವರದಿಗಳು ಪ್ರಕಟವಾಗಿತ್ತು.ಈ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ವೇಳೆ ಸಮಸ್ಯೆಗಳೂ ಉಂಟಾಗಿತ್ತು. ಈ ಹಿನ್ನೆಲೆಯಲ್ಲೇ ಯುಐಡಿಎಐ ಈ ಹೇಳಿಕೆ ನೀಡಿದೆ. ಭಾರತೀಯ ಪ್ರಜೆಗೆ ಕೆಲವೊಂದು ಸೇವೆಗಳನ್ನು ಸುನಿಶ್ಚಿತಗೊಳಿಸುವ ನಿಟ್ಟಿನಲ್ಲಿ ಆಧಾರ್ ನಂಬರ್ ಕೇಳಲಾಗುತ್ತದೆ. ವೈದ್ಯಕೀಯ ಸೇವೆ ಪಡೆಯಲು ಆಧಾರ್ ನಂಬರ್ ಅನಿವಾರ್ಯ ಅಲ್ಲ. ಆಧಾರ್ ನಂಬರ್ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ವ್ಯದ್ಯಕೀಯ ಸೇವೆ ನಿರಾಕರಿಸುವಂತಿಲ್ಲ. ಆಧಾರ್ ನಂಬರ್ ಇಲ್ಲದೇ ಹೋದರೂ ಬೇರೆ ಐಡಿ ಪ್ರೂಫ್ (ID Proof) ತೋರಿಸಿ ಕರೋನಾ ಲಸಿಕೆ (Corona vaccine) ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಜನತೆಗೆ ಯಾವುದೇ ಸಂದೇಹ ಬೇಡ.