ಜೈಲಿಂದ ತಿಂಗಳ ಹಿಂದಷ್ಟೇ ಹೊರ ಬಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ
ಶೇಖ್ ಬಾಬಾ ಅಲಿಯಾಸ್ ಬಂಡಿ ಬಾಬಾ ಜೈಲಿನಿಂದ ಹೊರ ಬಂದಿದ್ದು, ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೀಗ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಲಬುರಗಿ: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ತಿಂಗಳ ಹಿಂದಷ್ಟೇ ಹೊರ ಬಂದಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಗಾಲಿಬ್ ನಗರದಲ್ಲಿ ನಡೆದಿದೆ.
ಶೇಖ್ ಬಾಬಾ ಅಲಿಯಾಸ್ ಬಂಡಿ ಬಾಬಾ (35) ಕೊಲೆಯಾದ ವ್ಯಕ್ತಿ. ಶೇಖ್ ಬಾಬಾ, ಕಲಬುರಗಿ ನಗರದ ತಾಜ್ ನಗರದ ನಿವಾಸಿಯಾಗಿದ್ದು, ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ರಾತ್ರಿ ಆತನನ್ನು ಮನೆಯಿಂದ ಹೊರಗೆ ಕರೆಯಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶೇಕ್ ಬಾಬ ಪತ್ನಿಯ ಸಹೋದರ ಮಹಮದ್ ಚಾಂದ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಶೇಖ್ ಬಾಬಾ ಕಳೆದ ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದನಂತೆ. ಆಕೆ ತನ್ನ ಸಹೋದರ ಮಹಮದ್ ಚಾಂದ್ನನ್ನು ಕರೆಯಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.