LockDown: ಪಶ್ಚಿಮ ಬಂಗಾಳದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಮೂವರು ಬಿಜೆಪಿ ಶಾಸಕರ ಬಂಧನ!
ಕೋಲ್ಕತ್ತಾ (ಮೇ 16); ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಮಿತಿ ಮೀರುತ್ತಿದೆ. ಸಾವಿನ ಸಂಖ್ಯೆಯೂ ದಾಖಲೆ ಬರೆಯುತ್ತಿದೆ. ಹೀಗಾಗಿ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ನಿನ್ನೆಯಿಂದ 2 ವಾರಗಳ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿ ಆದೇಶಿಸಿದ್ದರು. ಅಲ್ಲದೆ, ಲಾಕ್ಡೌನ್ ನಿಯಮಗಳನ್ನೂ ಘೋಷಿಸಿದ್ದರು. ಆದರೆ, ಈ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂವರು ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಭಾನುವಾರ ವಶಕ್ಕೆ ತೆಗೆದುಕೊಳ್ಳ ಲಾಗಿದ್ದು, ನಂತರ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಬಂಗಾಳದಲ್ಲಿ ಹೆಚ್ಚುತ್ತಿರುವ COVID-19 ಸಾವುಗಳ ವಿಚಾರವಾಗಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರಾದ ಶಂಕರ್ ಘೋಷ್, ಆನಂದಮೊಯ್ ಬರ್ಮನ್ ಮತ್ತು ಸಿಖಾ ಚಟ್ಟೋಪಾಧ್ಯಾಯ ಅವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರು ಕೋವಿಡ್ ಪ್ರೋಟೊಕಾಲ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನಾ ಸಂದರ್ಭದಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಶಾಸಕರು ಲಾಕ್ ಡೌನ್ ಮಧ್ಯೆ ಧರಣಿ ನಡೆಸುವ ಮೂಲಕ ಅಲ್ಲಿನ ಪ್ರದೇಶದ ಜನರಿಗೆ “ದ್ರೋಹ” ಮಾಡಿದ್ದಾರೆ ಎಂದು ಟಿಎಂಸಿ ಹಿರಿಯ ಮುಖಂಡ ಗೌತಮ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, “ಮಾರಣಾಂತಿಕ ವೈರಸ್ ಹರಡುತ್ತಿರುವುದರ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳದ ಬಿಜೆಪಿ ನಾಯಕರ ನೈಜ ಮುಖವನ್ನು ಜನರು ನೋಡಲಿ. ಬಿಕ್ಕಟ್ಟಿನ ಸಂದರ್ಭಗಳನ್ನು ರಾಜಕೀಯಗೊಳಿಸುವುದರಲ್ಲಿ ಮಾತ್ರ ಬಿಜೆಪಿಗರು ಉತ್ಸುಕರಾಗಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಯಕರು ಮುಂದಾಗಿರುವುದು ದುರಾದೃಷ್ಟಕರ” ಎಂದು ಅವರು ಆರೋಪಿಸಿದ್ದಾರೆ.
ಬಂಗಾಳ ಲಾಕ್ಡೌನ್:
ಕೊರೋನಾ ನಿಯಂತ್ರಣಕ್ಕೆ ಮುಂದಾಗಿರುವ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ನಾಳೆಯಿಂದ ಪಶ್ಚಿಮ ಬಂಗಾಳದಲ್ಲಿ 2 ವಾರಗಳ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿ ಆದೇಶಿಸಿದೆ. ಈ ಅವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ, ಕೋಲ್ಕತಾ ಮೆಟ್ರೋ ಸೇರಿದಂತೆ ಸಾರಿಗೆ ಸೇವೆಗಳು ಕೂಡ ಸ್ಥಗಿತಗೊಳ್ಳಲಿವೆ. ಆದರೆ, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಾಜ್ಯದ ಅಧಿಸೂಚನೆ ತಿಳಿಸಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ದಿನಸಿ ಅಂಗಡಿಗಳು ಬೆಳಿಗ್ಗೆ 7 ರಿಂದ 10 ರವರೆಗೆ ತೆರೆದಿರುತ್ತವೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.
ವಿಶೇಷವೆಂದರೆ, ಪಶ್ಚಿಮ ಬಂಗಾಳದಲ್ಲಿ ಲಾಕ್ಡೌನ್ ಸಂದರ್ಭದಲ್ಲೂ ಆಹಾರ ಸಾಮಗ್ರಿ ಮಾರಾಟ, ತರಕಾರಿ ಮತ್ತು ಮಾಂಸ ಮಾರಾಟ ಮಳಿಗೆಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಅದೇ ರೀತಿ, ಪೆಟ್ರೋಲ್ ಪಂಪ್‌ಗಳು ತೆರೆದಿರುತ್ತವೆ ಮತ್ತು ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಇರುತ್ತವೆ. ಆದರೆ, ಈ ಎಲ್ಲಾ ಸೇವೆಗಳನ್ನೂ ಕೋವಿಡ್ ಗೈಡ್ಲೈನ್ ಪಾಲಿಸುವ ಮೂಲಕ ಪಡೆಯಬೇಕು ಎಂದು ಸೂಚಿಸಲಾಗಿದೆ.
ಕೈಗಾರಿಕೆಗಳನ್ನು ಮುಚ್ಚಲಾಗುತ್ತದೆಯಾದರೂ, ಚಹಾ ತೋಟಗಳಲ್ಲಿ ಶೇ.50 ರಷ್ಟು ಜನ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಅಲ್ಲದೆ, ಈ ಲಾಕ್ಡೌನ್ ಅವಧಿಯಲ್ಲಿ ಯಾವುದೇ ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ, ಆಡಳಿತಾತ್ಮಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಯಾವುದೇ ಹೊರಾಂಗಣ ಸಭೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ವಿವಾಹ ಸಮಾರಂಭಗಳಲ್ಲಿ 50 ಕ್ಕೂ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.