ಸಿನಿಮಾರಂಗದವರಿಗೆ ಕೋವಿಡ್ ಲಸಿಕೆ ಕೊಡಿ: ಡಾ.ಕೆ.ಸುಧಾಕರ್‌ಗೆ ಕೆಎಫ್‌ಸಿಸಿ ನಿಯೋಗ ಮನವಿ

ಹೈಲೈಟ್ಸ್‌:

  • ಚಿತ್ರರಂಗದವರಿಗೂ ಕೋವಿಡ್ ಲಸಿಕೆ ನೀಡಿ
  • ಡಾ.ಸುಧಾಕರ್‌ಗೆ ಕೆಫ್‌ಸಿಸಿ ನಿಯೋಗ ಮನವಿ
  • ಡಾ.ಸುಧಾಕರ್‌ರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಕೆಫ್‌ಸಿಸಿ ನಿಯೋಗ

ಮಹಾಮಾರಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಬಹುಮುಖ್ಯ ಅಸ್ತ್ರ. ಹೀಗಾಗಿ, ಕನ್ನಡ ಚಿತ್ರರಂಗದವರಿಗೆ ಕೋವಿಡ್ ಲಸಿಕೆ ನೀಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಳಿ ಕೆಎಫ್‌ಸಿಸಿ ನಿಯೋಗ ಮನವಿ ಮಾಡಿದೆ.

ಸಾರಾ ಗೋವಿಂದು, ಕೆಎಫ್‌ಸಿಸಿ ಉಪಾಧ್ಯಕ್ಷ ನಾಗಣ್ಣ, ಖಜಾಂಚಿ ವೆಂಕಟೇಶ್ ಮತ್ತು ಕೆ.ಎಂ.ವೀರೇಶ್ ಸೋಮವಾರ (ಮೇ 17) ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿದರು. ಕನ್ನಡ ಚಿತ್ರರಂಗದ ಎಲ್ಲರಿಗೂ ಲಸಿಕೆ ಒದಗಿಸುವಂತೆ ಡಾ.ಸುಧಾಕರ್ ಬಳಿ ಕೋರಿಕೊಂಡರು.

ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಕೊರತೆ ಉಂಟಾಗಿರುವುದರಿಂದ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿಲ್ಲ. ಆದರೂ, ಫ್ರಂಟ್ ಲೈನ್ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಕೊಡಲಾಗುತ್ತಿದೆ. ಚಿತ್ರರಂಗದವರನ್ನೂ ಪರಿಗಣಿಸಿ ಲಸಿಕೆ ನೀಡುವಂತೆ ಕೆಎಫ್‌ಸಿಸಿ ನಿಯೋಗ ಮನವಿ ಸಲ್ಲಿಸಿದೆ.

ಈಗಾಗಲೇ ಚಿತ್ರರಂಗದ ಹಲವು ಕಲಾವಿದರು ಕೋವಿಡ್ ಲಸಿಕೆ ಪಡೆದಿದ್ದಾರೆ. ಪುನೀತ್ ರಾಜ್‌ಕುಮಾರ್, ಜಗ್ಗೇಶ್ ದಂಪತಿ, ನಟ ಶ್ರೀಮುರಳಿ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಕೋವಿಡ್ ಲಸಿಕೆ ಪಡೆದಿದ್ದಾರೆ. ಇತರೆ ಕಲಾವಿದರು, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು, ಸಿನಿ ಕಾರ್ಮಿಕರಿಗೂ ಪ್ರತ್ಯೇಕವಾಗಿ ಲಸಿಕೆ ನೀಡುವ ಬಗ್ಗೆ ಡಾ.ಸುಧಾಕರ್ ಬಳಿ ಕೆಫ್‌ಸಿಸಿ ನಿಯೋಗ ಕೋರಿಕೊಂಡಿದೆ.

ಮಾರಣಾಂತಿಕ ಕೋವಿಡ್-19ನಿಂದಾಗಿ ಚಿತ್ರರಂಗ ಭಾರೀ ನಷ್ಟ ಅನುಭವಿಸಿದೆ. ಸದ್ಯ ಲಾಕ್‌ಡೌನ್‌ನಿಂದಾಗಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ, ಚಿತ್ರರಂಗದ ಭವಿಷ್ಯ ಹಾಗೂ ಸಿನಿ ಬಾಂಧವರ ಹಿತದೃಷ್ಟಿಯಿಂದ ಲಸಿಕೆ ನೀಡಿದರೆ, ಸುರಕ್ಷತಾ ಕ್ರಮಗಳನ್ನು ಪಾಲಿಸಿ ಚಿತ್ರರಂಗದ ಚಟುವಟಿಕೆಗಳನ್ನು ಪ್ರಾರಂಭಿಸಬಹುದು ಎಂಬುದು ಕೆಫ್‌ಸಿಸಿ ನಿಯೋಗದ ಆಶಯವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *