ಮೋದಿ ಟೀಕಿಸಿ ಭಿತ್ತಿಪತ್ರ ಅಂಟಿಸಿದವರ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ
ಹೈಲೈಟ್ಸ್:
- ‘ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿಕೊಟ್ಟಿರಿ ಮೋದಿಜೀ?’
- ಈ ರೀತಿ ಪ್ರಶ್ನಿಸಿ ದಿಲ್ಲಿಯ ಗೋಡೆಗಳಲ್ಲಿ ಭಿತ್ತಿಪತ್ರ ಅಂಟಿಸಲಾಗಿತ್ತು
- ಇದಾದ ಕೆಲ ಗಂಟೆಗಳಲ್ಲಿ ಪೋಸ್ಟರ್ ಅಂಟಿಸಿದ 24 ಮಂದಿಯ ಬಂಧನ
- ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ
- ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮ ಎಂದು ದೂರಿನಲ್ಲಿ ಉಲ್ಲೇಖ
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕೆಂದು ಕೋರಿ ಸೋಮವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಯಾಗಿದೆ.
ದಿಲ್ಲಿಯ ಬೀದಿಯ ಗೋಡೆಗಳಲ್ಲಿ ‘ನಮ್ಮ ಮಕ್ಕಳಿಗಾಗಿ ಕಾಯ್ದಿಟ್ಟ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳಿಸಿಕೊಟ್ಟಿರಿ ಮೋದೀಜಿ?’ ಎಂದು ಪ್ರಶ್ನಿಸಿ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ದಿಲ್ಲಿ ಪೊಲೀಸರು, ತ್ವರಿತ ಕಾರ್ಯಾಚರಣೆ ನಡೆಸಿ 24 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ತಕ್ಷಣ ಬಂಧಿಸಿದ್ದರು. ಅಲ್ಲದೇ 800ಕ್ಕೂ ಹೆಚ್ಚು ಪೋಸ್ಟರ್ ಮತ್ತು ಬ್ಯಾನರ್ ವಶಪಡಿಸಿ ಇನ್ನೂ ಹಲವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.
ಈ ಸಂಬಂಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರ ರವಿ ಕುಮಾರ್, ‘ಸಾಂಕ್ರಾಮಿಕ ನಿಭಾಯಿಸುವಲ್ಲಿನ ಮೋದಿ ಸರಕಾರದ ನಡೆ ಹಾಗೂ ಲಸಿಕಾ ನೀತಿ ಟೀಕಿಸಿ ದಿಲ್ಲಿಯ ಬೀದಿಗಳಲ್ಲಿ ಭಿತ್ತಿಪತ್ರ ಅಂಟಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 24 ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರೆಲ್ಲರ ವಿರುದ್ಧ ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮ. ತಕ್ಷಣವೇ ಎಫ್ಐಆರ್ ರದ್ದುಗೊಳಿಸವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.
ಪ್ರಧಾನಿ ವಿರುದ್ಧದ ಪೋಸ್ಟರ್ ಅಭಿಯಾನಕ್ಕೆ ಆಪ್ ಮುಖಂಡ ಅರವಿಂದ್ ಗೌತಂ 9000 ರೂ. ಹಣಕಾಸು ನೆರವು ಒದಗಿಸಿದ್ದು, ಅವರಿಗಾಗಿ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.