ಕೋಟಿಗೊಬ್ಬ-3′ ಬಗ್ಗೆ ಗುಲ್ಲೋ ಗುಲ್ಲು: ಗಾಸಿಪ್ ಹಬ್ಬಿಸಿದವರಿಗೆ ತಿರುಗೇಟು ಕೊಟ್ಟ ಸೂರಪ್ಪ ಬಾಬು!

ಹೈಲೈಟ್ಸ್‌:

  • ‘ಕೋಟಿಗೊಬ್ಬ-3’ ರಿಲೀಸ್ ಬಗ್ಗೆ ಗಾಸಿಪ್
  • ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಾ ‘ಕೋಟಿಗೊಬ್ಬ-3’?
  • ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದ ನಿರ್ಮಾಪಕ ಸೂರಪ್ಪ ಬಾಬು

ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ- 3’. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಕಳೆದ ತಿಂಗಳೇ ‘ಕೋಟಿಗೊಬ್ಬ- 3’ ಬಿಡುಗಡೆಯಾಗಬೇಕಿತ್ತು. ಆದರೆ, ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಮತ್ತು ಲಾಕ್‌ಡೌನ್ ನಿಂದಾಗಿ ‘ಕೋಟಿಗೊಬ್ಬ- 3′ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

”ಕೋಟಿಗೊಬ್ಬ- 3’ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ?” – ಈ ಪ್ರಶ್ನೆಗೆ ಸದ್ಯ ಚಿತ್ರತಂಡದವರ ಬಳಿ ಉತ್ತರವಿಲ್ಲ. ಯಾಕಂದ್ರೆ, ಕೊರೊನಾ ಆರ್ಭಟ ಕಡಿಮೆಯಾಗಿ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ಸಿಗುವವರೆಗೂ ‘ಕೋಟಿಗೊಬ್ಬ- 3’ ರಿಲೀಸ್ ಸಾಧ್ಯವಿಲ್ಲ ಎಂಬುದು ಚಿತ್ರತಂಡದ ಮಾತು.

ಹೀಗಿದ್ದರೂ, ‘ಕೋಟಿಗೊಬ್ಬ- 3’ ರಿಲೀಸ್ ಬಗ್ಗೆ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಒಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ‘ಕೋಟಿಗೊಬ್ಬ- 3’ ಬಿಡುಗಡೆಯಾಗಲಿದೆ ಎಂಬ ಗುಸು ಗುಸು ಕೇಳಿಬಂದಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅಭಿನಯದ ‘ರಾಧೆ’ ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ರಿಲೀಸ್ ಆಗಿತ್ತು. ಅದೇ ರೀತಿ ‘ಕೋಟಿಗೊಬ್ಬ- 3’ ಚಿತ್ರ ಕೂಡ ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಲದಕ್ಕೆ, ‘ಕೋಟಿಗೊಬ್ಬ- 3’ ಚಿತ್ರವನ್ನು ಖರೀದಿ ಮಾಡಲು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮುಂದೆ ಬಂದಿವೆ. ಒಟಿಟಿ ಪ್ಲಾಟ್‌ಫಾರ್ಮ್‌ವೊಂದು ‘ಕೋಟಿಗೊಬ್ಬ- 3’ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಆಫರ್ ಮಾಡಿದೆ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಹಾಗಾದರೆ, ಇದು ನಿಜವೇ? ‘ಕೋಟಿಗೊಬ್ಬ- 3’ ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗುತ್ತಾ? ಈ ಪ್ರಶ್ನೆಗೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟ ಉತ್ತರ ನೀಡಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಹೇಳುವುದೇನು?
”ಪ್ಲಾನ್ ಪ್ರಕಾರ ನಡೆದಿದ್ದರೆ, ಏಪ್ರಿಲ್ 29 ರಂದು ‘ಕೋಟಿಗೊಬ್ಬ- 3’ ತೆರೆಗೆ ಬರಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ನನಗಿಲ್ಲ. ನಮಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಿಂದ ಆಫರ್ ಬಂದಿರುವುದು ನಿಜ. ಆದರೆ, ಅದಕ್ಕೆ ನಾನು ಒಪ್ಪಿಕೊಂಡಿಲ್ಲ”.

‘ಕೋಟಿಗೊಬ್ಬ- 3’ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದೆ. ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆದರೆ 100 ಕೋಟಿ ಬಿಸಿನೆಸ್ ಮಾಡುತ್ತೆ ಎಂಬ ನಂಬಿಕೆ ನನಗಿದೆ. ಹೀಗಿರುವಾಗ, ನಾನ್ಯಾಕೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಮಾಡಲಿ?” ಎನ್ನುವ ಮೂಲಕ ಎಲ್ಲಾ ಗಾಸಿಪ್‌ಗಳಿಗೂ ಫುಲ್ ಸ್ಟಾಪ್ ಇಟ್ಟಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

ಸದ್ಯ ‘ಕೋಟಿಗೊಬ್ಬ- 3’ ಚಿತ್ರದ ಫಸ್ಟ್ ಕಾಪಿ ರೆಡಿಯಿದೆ. ಚಿತ್ರರಂಗದ ಚಟುವಟಿಕೆಗಳು ಆರಂಭವಾದಾಗ, ‘ಕೋಟಿಗೊಬ್ಬ- 3’ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೆ ‘ಕೋಟಿಗೊಬ್ಬ- 3’ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

ಅಂದ್ಹಾಗೆ, ‘ಕೋಟಿಗೊಬ್ಬ- 3’ ಚಿತ್ರದಲ್ಲಿ ಕಿಚ್ಚ ಸುದೀಪ್, ಮಡೋನ್ನಾ ಸೆಬ್ಯಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಬ್ ಶಿವದಾಸನಿ, ತಬಲಾ ನಾಣಿ, ರವಿ ಶಂಕರ್, ರಾಜೇಶ್ ನಟರಂಗ ಮುಂತಾದವರಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *