Coronavirus: ಕೋವಿಡ್ ನಿರ್ವಹಣೆ ಕುರಿತು ವೈದ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ (ಮೇ 18): ಕೋವಿಡ್ ಪರಿಸ್ಥಿತಿ ಕುರಿತು ದೇಶಾದ್ಯಂತದ ವೈದ್ಯರ ಗುಂಪಿನೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ಇದೇ ವೇಳೆ  ಕೋವಿಡ್‌ನ ಎರಡನೇ ಅಲೆಯ ಅಸಾಧಾರಣ ಸನ್ನಿವೇಶಗಳ ವಿರುದ್ಧ ವೈದ್ಯಕೀಯ ಸಮುದಾಯ  ಮತ್ತು ಅರೆವೈದ್ಯಕೀಯ ಸಿಬ್ಬಂದಿಯು ನಡೆಸುತ್ತಿರುವ ಅನುಕರಣೀಯ ಹೋರಾಟಕ್ಕೆ ಧನ್ಯವಾದ ಎಂದು ಹೇಳಿದ ಅವರು ಇಡೀ ದೇಶ ವೈದ್ಯ ಸಮೂಹಕ್ಕೆ ಋಣಿಯಾಗಿದೆ ಎಂದು ಹೇಳಿದರು. ಪರೀಕ್ಷೆಗಳು, ಔಷಧಿಗಳ ಪೂರೈಕೆ ಅಥವಾ ದಾಖಲೆಯ ಸಮಯದಲ್ಲಿ ಹೊಸ ಮೂಲಸೌಕರ್ಯಗಳನ್ನು ಸನ್ನದ್ದಗೊಳಿಸಲಾಗುವುದು ಎಂದು ತಿಳಿಸಿದರು. 

ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯ ಹಲವಾರು ಸವಾಲುಗಳನ್ನು ನಿವಾರಿಸಲಾಗುತ್ತಿದೆ. ಕೋವಿಡ್ ಚಿಕಿತ್ಸೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಾನವ ಸಂಪನ್ಮೂಲ ವೃದ್ಧಿಗೆ ಕೈಗೊಂಡ ಕ್ರಮಗಳು ಆರೋಗ್ಯ ವ್ಯವಸ್ಥೆಗೆ ಹೆಚ್ಚುವರಿ ಬೆಂಬಲವನ್ನು ನೀಡಿವೆ ಎಂದು ಅವರು ಹೇಳಿದರು.

ಮುಂಚೂಣಿಯ ಯೋಧರೊಂದಿಗೆ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸುವ ಕಾರ್ಯತಂತ್ರವು ಎರಡನೇ ಅಲೆಯಲ್ಲಿ ಅಪಾರ ಪ್ರಯೋಜನ ನೀಡಿದೆ. ದೇಶದ ಸುಮಾರು ಶೇ.90 ರಷ್ಟು ಆರೋಗ್ಯ ವೃತ್ತಿಪರರು ಈಗಾಗಲೇ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಲಸಿಕೆಗಳು ಬಹುತೇಕ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿವೆ ಎಂದರು.

ತಮ್ಮ ದೈನಂದಿನ ಕೆಲಸಗಳಲ್ಲಿ ಆಮ್ಲಜನಕ ಲೆಕ್ಕಪರಿಶೋಧನೆಯನ್ನು ಸೇರಿಸಿಕೊಳ್ಳಬೇಕು. ‘ಮನೆಯ ಪ್ರತ್ಯೇಕ ವಾಸ’ದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ರೋಗಿಯ ಮನೆ ಆರೈಕೆಯು ಎಸ್‌ಒಪಿ ಆಧಾರಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮನೆ ಪ್ರತ್ಯೇಕತೆಯಲ್ಲಿರುವ ರೋಗಿಗಳಿಗೆ ಟೆಲಿಮೆಡಿಸಿನ್ ದೊಡ್ಡ ಪಾತ್ರ ವಹಿಸಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೂ ಈ ಸೇವೆಯನ್ನು ವಿಸ್ತರಿಸಬೇಕಾಗಿದೆ ಎಂದು ಅವರು ಹೇಳಿದರು.

ತಂಡಗಳನ್ನು ರಚಿಸಿಕೊಂಡು ಹಳ್ಳಿಗಳಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಒದಗಿಸುತ್ತಿರುವ ವೈದ್ಯರನ್ನು ಅವರು ಶ್ಲಾಘಿಸಿದರು. ಇದೇ ರೀತಿಯ ತಂಡಗಳನ್ನು ರಚಿಸಿ, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮತ್ತು ಎಂಬಿಬಿಎಸ್ ಇಂಟರ್ನಿಗಳಿಗೆ ತರಬೇತಿ ನೀಡಬೇಕು ಮತ್ತು ದೇಶದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಟೆಲಿಮೆಡಿಸಿನ್ ಸೇವೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ದೇಶಾದ್ಯಂತದ ವೈದ್ಯರಿಗೆ ಮನವಿ ಮಾಡಿದರು.

ಕೋವಿಡ್‌ನ ಮೊದಲ ಅಲೆಯಿಂದ ಅವರು ಮಾಡಿಕೊಂಡ ಸಿದ್ಧತೆ ಮತ್ತು ಎರಡನೇ ಅಲೆಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ವೈದ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೋವಿಡ್ ವಿರುದ್ಧದ ಹೋರಾಟದಲ್ಲಿ, ಕೋವಿಡೇತರ ರೋಗಿಗಳ ಬಗ್ಗೆ ಸೂಕ್ತ ಕಾಳಜಿ ವಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಔಷಧಿಗಳ ಅಸಮರ್ಪಕ ಬಳಕೆಯ ವಿರುದ್ಧ ರೋಗಿಗಳಿಗೆ ತಿಳಿವಳಿಕೆ ನೀಡುವುದೂ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅನುಭವಗಳನ್ನು ವೈದ್ಯರು ಹಂಚಿಕೊಂಡರು.

ನೀತಿ ಆಯೋಗದ ಸದಸ್ಯ (ಆರೋಗ್ಯ), ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ಔಷಧ ಕಾರ್ಯದರ್ಶಿ ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *