Vaccine: ಶೀಘ್ರದಲ್ಲಿ ಮಕ್ಕಳಿಗೆ ಲಸಿಕೆ?; 10ರಿಂದ 12 ದಿನದಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಆರಂಭ- ಕೇಂದ್ರ ಸರ್ಕಾರ
ನವದೆಹಲಿ: 2ರಿಂದ 18 ವರ್ಷದ ಮಕ್ಕಳಿಗೆ ಮುಂದಿನ 10ರಿಂದ 12 ದಿನಗಳಲ್ಲಿ ಕೋವ್ಯಾಕ್ಸಿನ್ ಪ್ರಯೋಗ ಆರಂಭಿಸುವುದಾಗಿ ಮಂಗಳವಾರ ಕೇಂದ್ರ ಸರ್ಕಾರ ಹೇಳಿದೆ. ಆರೋಗ್ಯ ಸಚಿವಾಲಯ ಆಯೋಜಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಮಾತನಾಡಿ, ಎರಡು ಮತ್ತು ಮೂರನೇ ಹಂತದಲ್ಲಿ 2ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ. ಇನ್ನು ಮುಂದಿನ 10ರಿಂದ 12 ದಿನಗಳಲ್ಲಿ ಪ್ರಯೋಗ ನಡೆಯಲಿದೆ ಎಂದು ಡಾ ವಿ.ಕೆ. ಪಾಲ್ ಹೇಳಿದರು.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಭಾರತದಲ್ಲಿ ಮಾರಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ವಿರುದ್ಧ ಪರಿಣಾಮಕಾರಿ ಕಂಡು ಬಂದಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.
ಹೊಸ ಕೊರೋನಾ ವೈರಸ್ ಮೂರನೇ ತಳಿ ಹೆಚ್ಚು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ವರದಿಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಇದರ ಹಿಂದಿನ ದಿನ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಸಿಂಗಾಪುರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೋನಾ ವೈರಸ್ ಮಕ್ಕಳಿಗೆ ಮೇಲೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಹೊಸ ವೈರಸ್ ಮೂರನೇ ತರಂಗ ರೂಪದಲ್ಲಿ ಭಾರತವನ್ನು ಆಕ್ರಮಿಸಬಹುದು ಎಂದು ಅವರು ಟ್ವೀಟ್ಹೇ ಮೂಲಕ ತಿಳಿಸಿದ್ದರು.
“ಸಿಂಗಾಪುರದಲ್ಲಿ ಕಂಡುಬಂದಿರುವ ಹೊಸ ರೂಪದ ಕೊರೋನಾ ವೈರಸ್ ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು ಮೂರನೇ ಅಲೆಯ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಮನವಿ ಏನೆಂದರೆ ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಬೇಕು. ಮತ್ತು ಆದ್ಯತೆಯ ಆಧಾರದ ಮೇಲೆ ಮಕ್ಕಳಿಗೆ ಲಸಿಕೆ ಪರ್ಯಾಯಗಳ ಬಗ್ಗೆ ಕೆಲಸ ಮಾಡಬೇಕು,”ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಮಾಡಿದ್ದರು.