Tauktae Cyclone: ತೌಕ್ತೆ ಚಂಡಮಾರುತದ ಹಿನ್ನೆಲೆ, ಗುಜರಾತಿನಲ್ಲಿ ಇಂದು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
ಅಹಮದಾಬಾದ್, ಮೇ 19: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದಲ್ಲದೆ ಭಾರೀ ಪ್ರಮಾಣದಲ್ಲಿ ಆಸ್ತಿ ನಷ್ಟ ಆಗಿದೆ. ಗುಜರಾತ್ ರಾಜ್ಯದಲ್ಲಿ 1998ರಿಂದ ಇತ್ತೀಚೆಗೆ ನಡೆದ ಎರಡನೇ ದೊಡ್ಡ ದುರಂತ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿ ಆಗಿರುವ ಭಾವ್ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಉಪಸ್ಥಿತಿರಿರಲಿದ್ದಾರೆ. ವೈಮಾನಿಕ ಸಮೀಕ್ಷೆ ಬಳಿಕ ಪ್ರಧಾನಿ ಮೋದಿ ಮತ್ತು ವಿಜಯ್ ರೂಪಾಣಿ ರಾಜ್ಯ ಸರ್ಕಾರದ ಮತ್ತು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ತಂಡದ (NDRF) ಅಧಿಕಾರಿಗಳಿಂದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ವತಿಯಿಂದ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತೌಕ್ತೆ ಚಂಡಮಾರುತ ಬಿರುಸಾಗಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದೆ. ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲವು ಕಡೆ ಭೂಕುಸಿತ ಮತ್ತು ಸಮುದ್ರ ಕೊರೆತ ಉಂಟಾಗಿದೆ. ಇದರ ಪರಿಣಾಮದಿಂದ 150ಕ್ಕೂ ಹೆಚ್ಚು ರಸ್ತೆಗಳು ಕೊಚ್ಚಿಹೋಗಿವೆ. ಅಲ್ಲದೆ ಕರಾವಳಿ ಭಾಗದ ಹೆದ್ದಾರಿಗಳಿಗೆ ಹಾನಿ ಕೂಡ ಆಗಿದೆ.
ಗುಜರಾತ್ನಲ್ಲಿ ಇದುವರೆಗೂ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಅಹಮದಾಬಾದ್ ಏರ್ಪೋರ್ಟ್ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್‌ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್ನಲ್ಲಿ 1998ರ ನಂತರ ಕಳೆದ 23 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಎನ್ನಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. ಉತ್ತರ ವಾಯವ್ಯ ಭಾಗದತ್ತ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್ ನಷ್ಟು ಇರಲಿದೆ. ಮಹಾರಾಷ್ಟ್ರ, ಗುಜರಾತ್ನಲ್ಲಿ ಬುಧವಾರ ಕೂಡ ಮಳೆಯಾಗುತ್ತಿದೆ.
ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದೇ 20ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.