ತೌಕ್ತೆ ಚಂಡಮಾರುತ: ಮುಂಬಯಿ ಬಳಿ ನೌಕಾ ದುರಂತಕ್ಕೆ 26 ಬಲಿ, 50 ಮಂದಿ ಕಣ್ಮರೆ; ಗುಜರಾತ್‌ನಲ್ಲಿ 65 ಮಂದಿ ಸಾವು!
ಹೈಲೈಟ್ಸ್:
- ಗುಜರಾತ್, ಮುಂಬಯಿನಲ್ಲಿ ಅಬ್ಬರಿಸುತ್ತಿರುವ ತೌಕ್ತೆ ಚಂಡಮಾರುತ
- ಮುಂಬಯಿ ಬಳಿ ನೌಕಾ ದುರಂತಕ್ಕೆ 26 ಬಲಿ, 50 ಮಂದಿ ಕಣ್ಮರೆ
- ಗುಜರಾತ್‌ನಲ್ಲಿ ಸಾವಿನ ಸಂಖ್ಯೆ 65ಕ್ಕೆ ಏರಿಕೆ
ಮುಂಬಯಿ: ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ತೌಕ್ತೆ ಚಂಡಮಾರುತ ನಿರೀಕ್ಷೆಗೂ ಮೀರಿದ ಅನಾಹುತ ಸೃಷ್ಟಿಸಿ ಹೋಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಸಾವು ನೋವಿನ ಸರಣಿಗಳಿಂದ ತತ್ತರಿಸಿವೆ. ಮುಂಬಯಿ ಸಮೀಪ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ಬಾರ್ಜ್(ನೌಕೆ) ಮುಳುಗಿದ್ದು, ಅದರಲ್ಲಿದ್ದ 26 ಮಂದಿ ಮೃತಪಟ್ಟಿದ್ದಾರೆ.
ಇತರೆ 50 ಮಂದಿ ಕಣ್ಮರೆಯಾಗಿದ್ದಾರೆ. ‘ಪಪಾ-305’ ದುರಂತದಲ್ಲಿ ಮುಳುಗಿದ ನೌಕೆ. ಮುಂಬಯಿನಿಂದ 50 ಕಿ.ಮೀ ದೂರದ ಒಎನ್‌ಜಿಸಿ ತೈಲ ಕೊಳವೆ ಬಾವಿಯಿಂದ ಸಿಬ್ಬಂದಿಯನ್ನು ಕರೆ ತರುವ ಮಾರ್ಗ ಮಧ್ಯೆ ಈ ನೌಕೆ ಚಂಡಮಾರುತಕ್ಕೆ ಸಿಲುಕಿ ಮುಳುಗಿದೆ. ಮಂಗಳವಾರ ಮಧ್ಯಾಹ್ನ ಈ ದುರಂತ ಘಟಿಸಿತ್ತು.
286 ಜನರನ್ನು ಹೊತ್ತ ಬಾರ್ಜ್ ದಡ ಸೇರಲು ಇನ್ನೂ ಒಂದು ತಾಸಿನ ದಾರಿ ಉಳಿದಿದ್ದಾಗಲೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿತು. ತಕ್ಷಣ ರಕ್ಷಣೆಗೆ ಮನವಿ ಮಾಡಲಾಯಿತು. ನೌಕಾ ಪಡೆ ಯೋಧರು ಹೆಲಿಕಾಪ್ಟರ್ ಮೂಲಕ ಬಾರ್ಜ್‌ನಲ್ಲಿದ್ದ 186 ಮಂದಿಯನ್ನು ರಕ್ಷಿಸಿದರು. ಉಳಿದವರಿಗೆ ನೆರವಿನ ಹಸ್ತ ಚಾಚುತ್ತಿರುವಾಗಲೇ ನೌಕೆ ಬುಡಮೇಲಾಯಿತು.
ರಕ್ಕಸ ಗಾತ್ರದ ಅಲೆ ಹಾಗೂ ಶರವೇಗದ ಗಾಳಿಗೆ ಕಡಲು ಅಯೋಮಯವಾಯಿತು. ಮುಗುಚಿದ ನೌಕೆ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿತು. ಬುಧವಾರ ಕಾರ್ಯಾಚರಣೆ ಮುಂದುವರಿಸಿದ ನೌಕಾ ಪಡೆ, ದುರಂತ ಸ್ಥಳದಿಂದ 25 ಮೃತದೇಹಗಳನ್ನು ಮೇಲಕ್ಕೆತ್ತಿದೆ. ಕಣ್ಮರೆಯಾಗಿರುವ 50 ಮಂದಿಗಾಗಿ ಹುಡುಕಾಟ ಸಾಗಿದೆ.
ಸಾರ್ವಜನಿಕ ಒಡೆತನದ ಒಎನ್‌ಜಿಸಿ ತೈಲ ಬಾವಿಯಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಮಂಗಳವಾರ ಚಂಡಮಾರುತದ ಮುನ್ಸೂಚನೆ ಇದ್ದದ್ದರಿಂದ ದಿನದ ಅರ್ಧದಲ್ಲಿಯೇ ದುಡಿಮೆ ನಿಲ್ಲಿಸಿ, ಅವಸರದಲ್ಲಿಯೇ ಮನೆಗೆ ವಾಪಸಾಗಿದ್ದರು. ಆದರೆ, ಮನೆ ಸೇರುವ ಮೊದಲೇ ಸಾವು ಅವರನ್ನು ಸೆಳೆದೊಯ್ದಿದೆ.