ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ: ಕೇಂದ್ರದ ಮಾಹಿತಿ
ನವ ದೆಹಲಿ, ಮೇ 21-ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಕಾರಾತ್ಮಕ ಪ್ರಮಾಣವು ಶೇ.13.31 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಮಾಹಿತಿ ನೀಡಿದೆ.
ಇದು ಒಂದು ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಕರಣವಾಗಿದೆ. ಆದರೂ, ತಮಿಳುನಾಡು, ಮೇಘಾಲಯ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮತ್ತು ಮಿಜೋರಾಂನಂತಹ ಏಳು ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳ ಏರಿಕೆಯಾಗುತ್ತಿದೆ. ಒಂದು ದಿನವೂ ಸಹ ಇನ್ನು ನಿರ್ಲಕ್ಷ್ಯವಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ದೆಹಲಿಯಲ್ಲಿ ಇಂದು ಸುದ್ದಿಗಾರರಿಗೆ ವಿವರಿಸಿದರು.
ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಚೇತರಿಕೆ ಪ್ರಮಾಣ ಶೇ.86.7 ರಷ್ಟಿದೆ. 21 ರಾಜ್ಯಗಳು ದೈನಂದಿನ ಕೋವಿಡ್ -19 ಪ್ರಕರಣಗಳಿಗಿಂತ ಹೆಚ್ಚಿನ ಚೇತರಿಕೆ ವರದಿಗಳು ಕಂಡು ಬರುತ್ತಿವೆ ಎಂದರು.
ಕಳೆದ 13 ದಿನಗಳಿಂದ ಈ ಕುಸಿತವನ್ನು ನೇರವಾಗಿ ನೋಡಿದ್ದೇವೆ. ಸಾವಿನ ಮಾಹಿತಿಯೂ ಈಗ ಕಡಿಮೆಯಾಗುತ್ತಿದೆ. ದೇಶದ ಎಂಟು ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಒಂಬತ್ತು ರಾಜ್ಯಗಳಲ್ಲಿ 50,000 ರಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 19 ರಾಜ್ಯಗಳು 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಈ ಪೈಕಿ ತಮಿಳುನಾಡು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಹರಿಯಾಣ, ಗುಜರಾತ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ, ದೆಹಲಿ ಮತ್ತು ಜಾರ್ಖಂಡ್ ಸೇರಿದಂತೆ 10 ರಾಜ್ಯಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಅಗರ್ ವಾಲ್ ಹೇಳಿದರು.