ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ

ಕಲಬುರಗಿ.ಮೇ.21:ಪಶು ವೈದ್ಯರನ್ನು ಹಾಗೂ ಪಶು ಆಸ್ಪತ್ರೆಗಳ ಇತರೆ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ, ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಈ‌ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರಿಗೆ ಪತ್ರ ಬರೆದಿರುವ ಅವರು ಕೊರೋನಾ ಭೀತಿಯ ನಡುವೆಯೂ ಗ್ರಾಮಗಳಲ್ಲಿ ರೈತರ ಮನೆ ಮನೆಗೆ ಭೇಟಿ ನೀಡಿ ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಇತರೆ ಜಾನುವಾರುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಜೊತೆಗೆ ಪಶು ಆಸ್ಪತ್ರೆಗಳ ಇತರೆ ಸಿಬ್ಬಂದಿಗಳೂ ಕೂಡಾ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಕರ್ತವ್ಯದಲ್ಲಿರುವಾಗಲೇ 60 ಕ್ಕೂ ಅಧಿಕ‌ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, 8 ಕ್ಕೂ ಅಧಿಕ‌ ನೌಕರರು ಸೋಂಕಿಗೆ ಬಲಿಯಾಗಿದ್ದಾರೆ. ಆದರೂ ಕೂಡಾ ಸರ್ಕಾರ ಇವರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿರುವುದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶದ ಜನತೆ ತಮ್ಮ ಜೀವನೋಪಾಯಕ್ಕಾಗಿ ವ್ಯವಸಾಯದ ಜೊತೆಗೆ ಪಶುಪಾಲನೆಯನ್ನೂ ಕೂಡಾ ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದ ರೈತರ ಆರ್ಥಿಕಾಭಿವೃದ್ದಿಯಲ್ಲಿ ಜಾನುವಾರುಗಳು ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ. ಪಶು ವೈದ್ಯರು ಹಾಗೂ ಇತರೆ‌ ಸಿಬ್ಬಂದಿಗಳು ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವ ಮೂಲಕ ರೈತರ ಜೀವನ‌ ಮಟ್ಟವನ್ನು ಸುಧಾರಿಸಲು ಹಾಗೂ ರಾಜ್ಯದ ಪಶು ಸಂಪತ್ತನ್ನು ಕಾಪಾಡುತ್ತಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು ರೈತರು ಕೃಷಿ‌ ಚಟುವಟಿಕೆ ಪ್ರಾರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವುದರಲ್ಲಿ ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿ‌ ಕಾರಣೀಭೂತರಾಗಿರುತ್ತಾರೆ. ಆದ್ದರಿಂದ ಪಶು ವೈದ್ಯರು ಹಾಗೂ ಪಶು ಆಸ್ಪತ್ರೆಗಳ ಇತರೆ ಸಿಬ್ಬಂದಿಗಳನ್ನು ಕೂಡಾ ಕೊರೋನಾ ವಾರಿಯರ್ಸ್ ಗಳೆಂದು ಪರಿಗಣಿಸಿ ಅವರಿಗೆ ಆದ್ಯತೆಯ ಮೇಲೆ ಲಸಿಕೆ‌ ನೀಡುವುದರ ಜೊತೆಗೆ ಅವರುಗಳಿಗೆ ಅಗತ್ಯ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು. ಪ್ರಮುಖವಾಗಿ ಪಶು ವೈದ್ಯರು ಹಾಗೂ ಇತರೆ ಸಿಬ್ಬಂದಿಗಳಿಗೆ ಒಂದು ವೇಳೆ ಕೊರೋನಾ ಸೋಂಕು ತಗುಲಿದರೆ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಅವರು ತಾವು ಬರೆದ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *