DK Shivakumar: ಬಿಜೆಪಿಯವರು ತಮ್ಮ ವೈಫಲ್ಯವನ್ನು ಎಷ್ಟೇ ಮುಚ್ಚಿಟ್ಟರೂ ನಮಗೆ ಮಾಹಿತಿ ಸಿಗುತ್ತದೆ: ಡಿ.ಕೆ ಶಿವಕುಮಾರ್
ಬೆಂಗಳೂರು: “ಬಿಜೆಪಿ ಸರ್ಕಾರ ಎಷ್ಟೇ ತಮ್ಮ ವೈಫಲ್ಯ ಮುಚ್ಚಿಡಲು ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಸಿಗುತ್ತದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಇದು ಸಂವಿಧಾನ ಬದ್ಧವಾಗಿ ಬಂದಿರುವ ಹುದ್ದೆ, ಅಧಿಕಾರ. ಯಡಿಯೂರಪ್ಪ ನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಿಲ್ಲೆ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ಮಾಡಿಲ್ಲವೇ? ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯಾವ ರೀತಿ ನೆರವು ಮಾಡುತ್ತಿದ್ದಾರೆ ಎಂದು ಪರಿಶೀಲಿಸಲು ಅಡ್ಡಿ ಮಾಡುತ್ತಿರುವುದು, ಇವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ” ಎಂದು ತಿಳಿಸಿದ್ದಾರೆ.
ನಾವು ಬಳ್ಳಾರಿಗೆ ಪ್ರವಾಸ ಮಾಡಬೇಕಿತ್ತು, ಅನುಮತಿ ನೀಡದ ಹಿನ್ನೆಲೆಯಲ್ಲಿ ಅದನ್ನು ತಡೆ ಹಿಡಿಯಲಾಗಿದೆ. ಅವರು ಎಷ್ಟೇ ಮುಚ್ಚಿಟ್ಟರು, ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೇನು ಹೆಚ್ಚುಕಮ್ಮಿ ಆಗುತ್ತಿದೆ ಅಂತಾ ನಮಗೆ ಮಾಹಿತಿ ಬರುತ್ತಿವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೇವೆಗೆ ಮೆಚ್ಚಿ ಸಹಕಾರ:
ಕಾಂಗ್ರೆಸ್ ಕೇರ್ ಸೆಂಟರ್ ಮೂಲಕ 150ಕ್ಕೂ ಹೆಚ್ಚು ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಇದನ್ನು ಗಮನಿಸಿ ಅನೇಕ ದಾನಿಗಳು ನಮಗೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಇದನ್ನು ನೋಡಿ ಅಟಿಕಾ ಕಂಪನಿಯವರು ಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರು ಹಣ ಕೊಡಲು ಮುಂದಾಗಿದ್ದರು ನಾವು ಹಣ ಬೇಡ, ಕಷ್ಟಕಾಲದಲ್ಲಿ ಅಗತ್ಯ ವಸ್ತುಗಳನ್ನು ನೀಡಿ ಎಂದು ಹೇಳಿದೆವು. ಹೀಗಾಗಿ ಸುಮಾರು 25 ಲಕ್ಷ ರೂ. ಮೊತ್ತದ 7.5 ಲೀಟರ್ ಆಕ್ಸಿಜನ್ ಕಾಂಸ್ಸಂಟ್ರೇಟರ್ ಅನ್ನು ಕೊಟ್ಟಿದ್ದಾರೆ. ಇದನ್ನು ಅಗತ್ಯ ಇರುವವರಿಗೆ ಹಂಚುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಈ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಸಂಸ್ಥೆಗೆ ಈ ರೀತಿ ಹತ್ತಾರು ಸೇವೆ ಮಾಡುವ ಶಕ್ತಿ ಅವರಿಗೆ ಸಿಗಲಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗಾಳಿಯಲ್ಲಿ ಹರಡುತ್ತಿದೆ ಕೊರೋನಾ; ಕೇಂದ್ರ ಎಚ್ಚರಿಕೆ:
ಕೊರೋನಾ ಎರಡನೇ ಅಲೆ ಪ್ರಸ್ತುತ ದೇಶದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದರೆ, ಮತ್ತೊಂದೆಡೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾ ಗುತ್ತಲೇ ಇದೆ. ಪರಿಣಾಮ ದೇಶದ ಜನ ಆತಂಕಕ್ಕೆ ಸಿಲುಕಿದ್ದಾರೆ. ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರ ಬದುಕು ಅಸಹನೀಯವಾಗಿ ಪರಿಣಮಿಸಿದೆ. ಈ ನಡುವೆ ಕೊರೋನಾ ಸೋಂಕಿನ ಬಗ್ಗೆ ಕೇಂದ್ರ ಸರ್ಕಾರ ಹೊರಹಾಕಿರುವ ಮಾಹಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ಸೋಂಕಿತ ವ್ಯಕ್ತಿ ಸೀನಿದಾಗ, ಉಸಿರು ಬಿಟ್ಟಾಗ ಅಥವಾ ಕೆಮ್ಮಿದಾಗ ಬಾಯಿ ಮತ್ತು ಮೂಗಿನಿಂದ ಹೊರ ಹೊಮ್ಮುವ ಹನಿಗಳು ಎರಡು ಮೀಟರ್ ದೂರದವರೆಗೆ ಬೀಳುತ್ತವೆ. ಆ ಹನಿಗಳ ಸಣ್ಣ ಕಣಗಳು (ಏರೋಸಾಲ್) 10 ಮೀಟರ್ ದೂರದವರೆಗೆ ಗಾಳಿಯಲ್ಲಿ ಸಾಗಬಹುದು. ಇದರಿಂದ ಇತರರಿಗೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಮಾಹಿತಿಯೊಂದಿಗೆ ಕೋವಿಡ್ ವಿರುದ್ಧ ಹೋರಾಡುವ, ಅನುಸರಿಸಲು ಸುಲಭವಾದ ಮಾರ್ಗಸೂಚಿಗಳನ್ನು ಸಹ ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಇದರಲ್ಲಿ ಸೋಂಕಿನಿಂದ ಸುರಕ್ಷಿತವಾಗಿರಲು ಡಬಲ್ ಮಾಸ್ಕ್ ಬಳಸುವುದು, ದೈಹಿಕ ಅಂತರ ಮತ್ತು ಉತ್ತಮ ಗಾಳಿ, ಸ್ವಚ್ಛತೆ ಇರುವ ಸ್ಥಳಗಳಲ್ಲಿ ಇರುವುದು ಸೇರಿದಂತೆ ಹಲವಾರು ವಿಚಾರಗಳನ್ನು ಅನುಸರಿಸುವಂತೆ ಹೇಳಲಾಗಿದೆ.
“ಸರಿಯಾದ ಗಾಳಿ, ಸ್ವಚ್ಛತೆ ಇರುವ ವಾತಾವರಣದಲ್ಲಿ ಕೊರೋನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಪಾಯ ಕಡಿಮೆ ಇದೆ. ತೆರೆದಿರುವ ಕಿಟಕಿಗಳು ಮತ್ತು ಬಾಗಿಲುಗಳು, ಫ್ಯಾನ್ ಮೂಲಕ ಹೆಚ್ಚಿನ ಗಾಳಿ ಒಳ-ಹೊರಗೆ ಹೋಗುವುದರಿಂದ ವೈರಸ್ ಹರಡುವ ಸಾಧ್ಯತೆ ಕಡಿಮೆ ಇದೆ” ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಅವರ ಕಚೇರಿ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.